ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನ್ಯ ಸಿದ್ದರಾಮಯ್ಯನವರೇ, ಮಾತು ಮಾತಿಗೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ನೀವು ರಾಜ್ಯದಲ್ಲಿ ಏನು ಸಾಧಿಸಿದ್ದೀರಿ, ನಿಮ್ಮ ಸಾಧನೆಯೆಲ್ಲವೂ ಶೂನ್ಯ ಎನ್ನುವುದನ್ನು ಸಿವಿಕ್ ಸಂಸ್ಥೆ ಇದೀಗ ಬಯಲು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದರು.
ನಿಮಗೆ ನಿಜಕ್ಕೂ ರೈತ ಕಾಳಜಿ ಇದ್ದಿದ್ದರೆ ಕಬ್ಬು ಬೆಳೆಗಾರರ ಬೇಡಿಕೆಯ ಬಗ್ಗೆ ಸ್ಪಂದಿಸಬೇಕೆಂಬ ಪ್ರಾಮಾಣಿಕತೆ ಇದ್ದರೆ, ಬೇಡಿಕೆ ಈಡೇರಿಸುವಂತೆ ನಿರಂತರ ನಿವೇದನೆಯನ್ನು ಸಲ್ಲಿಸಿದ ರೈತರ ಬೇಡಿಕೆಯನ್ನು ಕಸದ ಬುಟ್ಟಿಗೆ ಏಕೆ ಎಸೆದಿರಿ? ರೈತರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿಮಿಸಿದವರು ಯಾರು?
ಕಬ್ಬು ಬೆಳೆಗಾರರ ಸತತ 9 ದಿನಗಳ ಹೋರಾಟದ ಕೂಗು ಮುಗಿಲು ಮುಟ್ಟುವವರೆಗೂ ನಿಮ್ಮ ಸರ್ಕಾರ ನಿದ್ರೆಗೆ ಜಾರಿತ್ತು, ಚಳವಳಿ ಕಿಚ್ಚು ದಿನೇ ದಿನೇ ಹೆಚ್ಚುತ್ತಿರುವುದರ ತಾಪವನ್ನು ತಡೆದುಕೊಳ್ಳದೇ ಕೊನೆಗೂ ನೀವು ಮಣಿದು ರೈತರ ಬೇಡಿಕೆಗೆ ತಲೆಬಾಗಿದ್ದೀರಿ.
ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ರೈತರೆಂದರೆ ಅಸಡ್ಡೆ, ರೈತ ಬೇಡಿಕೆಗಳೆಂದರೆ ನಿಮಗೆ ತಾತ್ಸಾರ, ರೈತ ಹೋರಾಟಗಳನ್ನು ಹತ್ತಿಕ್ಕುವುದು ನಿಮ್ಮ ಅಜೆಂಡಾ. ರೈತ ಕಲ್ಯಾಣಕ್ಕಾಗಿ ಯಾವ ಯೋಜನೆಯನ್ನೂ ಜಾರಿಗೆ ತರಲಿಲ್ಲ. ‘ಮಾತುಮಾತಿಗೂ ಕೇಂದ್ರದತ್ತ ಬೊಟ್ಟು ಮಾಡುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವುದು’ ನಿಮ್ಮ ತಂತ್ರವಾಗಿದೆ ಎಂದು ವಿಜಯೇಂದ್ರ ಹರಿಹಾಯ್ದರು.
ಕಬ್ಬು ಬೆಳೆಗಾರರ ಹೋರಾಟದಲ್ಲಿ ನಾನು ಭಾಗಿಯಾದ ಕುರಿತು ವ್ಯಂಗ್ಯವಾಡಿದ್ದೀರಿ, ನಾನು ಹೋರಾಟದ ಕುಟುಂಬದ ಹಿನ್ನೆಲೆಯಿಂದ ಬಂದವನು, ಬಾಲ್ಯದಿಂದಲೇ ಹೋರಾಟಗಳನ್ನು ಹತ್ತಿರದಿಂದ ಕಂಡವನು, ಹೋರಾಟ ಎನ್ನುವುದು ನನಗೆ ಹೊಸದಲ್ಲ, ಆದರೆ ಅಧಿಕಾರ ರಾಜಕಾರಣಕ್ಕಾಗಿ ಚಿನ್ನದ ಸ್ಪೂನ್ ಹಿಡಿದು ಬಂದ ನೀವು ಶಾಸಕರಾಗುವ ಮೊದಲು ಯಾವ ಚಳುವಳಿಯ ಹಿನ್ನೆಲೆಯಿಂದ ಬಂದಿದ್ದೀರಿ? ಎಂಬ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ.
ಅಧಿಕಾರ ರಾಜಕಾರಣಕ್ಕಾಗಿ ಸಮಾವೇಶ ಸಂಘಟಿಸುವುದು, ಪಾದಯಾದ್ರೆ ನಡೆಸುವುದು ಇಂಥಾ ಉದಾಹರಣೆಗಳನ್ನು ಬಿಟ್ಟರೆ ರೈತರಿಗಾಗಿ ಯಾವುದಾದರೂ ಚಳವಳಿಯನ್ನು ಸಂಘಟಿಸಿದ್ದೀರಾ? ಅಥವಾ ನೇತೃತ್ವ ವಹಿಸಿದ್ದೀರಾ? ಐತಿಹಾಸಿಕ ಗೋಕಾಕ್ ಚಳುವಳಿ ಅಥವಾ ಕನ್ನಡ ಪರ ಹೋರಾಟಗಳಲ್ಲಿ ನೀವೆಂದಾದರೂ ಭಾಗವಹಿಸಿದ್ದೀರಾ?
ದಲಿತಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದೀರಾ? ಹಿಂದುಳಿದವರಿಗಾಗಿ ಬೀದಿಗಿಳಿದು ಎಂದಾದರೂ ದನಿ ಎತ್ತಿದ್ದೀರ?ನಿಮ್ಮದೇನಿದ್ದರೂ ಅಧಿಕಾರ ರಾಜಕಾರಣಕ್ಕಾಗಿ ನಡೆಸಿದ ಸಮಾವೇಶಗಳು, ಮೆರವಣಿಗೆಗಳು ಬಿಟ್ಟರೆ ಇನ್ಯಾವ ದಾಖಲೆಯೂ ನಿಮ್ಮ ರಾಜಕೀಯ ಜೀವನದ ಪುಟದಲ್ಲಿ ಈವರೆವಿಗೂ ಎಲ್ಲಿಯೂ ದಾಖಲಾಗಿರುವುದು ಕಂಡು ಬಂದಿಲ್ಲ. ಕೂತು ಉಂಡವರ ಸಾಲಿನಲ್ಲಷ್ಟೇ ನೀವು ಗೋಚರಿಸುತ್ತೀರಿ.
ನಿಮ್ಮದೇನಿದ್ದರೂ ಹೋರಾಟಗಾರರನ್ನು ಅವಮಾನಿಸುವುದು, ಹೋರಾಟಗಾರರ ಮೇಲೆ ದೌರ್ಜನ್ಯ ನಡೆಸುವುದು, ಚಳುವಳಿ ಮಾಡುವವರನ್ನು ವ್ಯಂಗ್ಯವಾಗಿ ಅವಮಾನಿಸುವುದು, ಇದು ನಿಮ್ಮ ಸಂಸ್ಕೃತಿ, ನಡೆ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದರು.

