ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ರೈತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ-ಜಿಲ್ಲಾಧಿಕಾರಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡುವ ಮೂಲಕ ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ರೈತರ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಲಭ್ಯವಿದ್ದು,  ರೈತರಿಗೆ ಸರ್ಕಾರದ ಯೋಜನೆಗಳು ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡಿ, ರೈತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು. ಬೆಳೆ ಜಂಟಿ ಸಮೀಕ್ಷೆ, ಬೆಳೆ ಕಟಾವು ಪ್ರಯೋಗ, ಮಧ್ಯಂತರ ಬೆಳೆ ಪರಿಹಾರ ಮಾಹಿತಿ ಕುರಿತು ರೈತರೊಂದಿಗೆ ಚರ್ಚಿಸಿ, ರೈತರ ಸಮಸ್ಯೆಗಳನ್ನು ನಿಮ್ಮ ಹಂತದಲ್ಲಿಯೇ ಪರಿಹರಿಸಲು ಕ್ರಮವಹಿಸಬೇಕು ಅಧಿಕಾರಿಗಳಿಗೆ ನಿರ್ದೇಶಿಸಿದರು.

- Advertisement - 

ಜಿಲ್ಲೆಯಲ್ಲಿ ಬೆಳೆ ನಷ್ಟ ಅನುಭವಿಸಿದ ಅರ್ಹ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಹಣ ಪಾವತಿಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದ ಅವರು ಬೆಳೆ ಕಟಾವು ಪ್ರಯೋಗ ಸಮರ್ಪಕವಾಗಿ ನಡೆಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಳೆ ಪರಿಹಾರ ವಿತರಣೆ: ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆಯಿಂದಾಗಿ ಬೆಳೆನಷ್ಟ ಅನುಭವಿಸಿದ ಜಿಲ್ಲೆಯ 769 ರೈತರಿಗೆ ರೂ. 109.93 ಲಕ್ಷ ಪರಿಹಾರ ಮೊತ್ತವನ್ನು ಈಗಾಗಲೇ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

- Advertisement - 

ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ ಹಣ ಪಾವತಿಯಾಗಿಲ್ಲ. ತಾಂತ್ರಿಕ ಸಮಸ್ಯೆ ಬಗೆಹರಿಸಿ, ಸಂಬಂಧಪಟ್ಟ ರೈತರಿಗೆ ಬೆಳೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

2023-24ನೇ ಸಾಲಿನಲ್ಲಿ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ರೂ.46 ಕೋಟಿ ಹಗರಣ ನಡೆದಿದೆ ಎಂದು ರೈತ ಸಂಘದವರು ದೂರು ನೀಡಿ, ತನಿಖೆ ನಡೆಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಸಮಗ್ರ ವರದಿ ಸರ್ಕಾರಕ್ಕೆ ಕಳಿಸಲಾಗಿದ್ದು, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

139 ಹೊಸ ಕಂದಾಯ ಗ್ರಾಮಗಳ ಘೋಷಣೆ: ಜಿಲ್ಲೆಯಲ್ಲಿ 139 ಹೊಸ ಕಂದಾಯ ಗ್ರಾಮಗಳ ಘೋಷಣೆಗೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಕಂದಾಯ ಗ್ರಾಮಗಳ ಘೋಷಣೆ ಆದ ನಂತರ ಮನೆಗಳ ಹಕ್ಕು ಪತ್ರ ಹಾಗೂ ಇ-ಸ್ವತ್ತುನ್ನೂ ವಿತರಣೆಗೆ ಅಗತ್ಯ ಸಿದ್ಧತೆ  ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರೈತ ಮುಖಂಡ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನ ದ್ಯಾಮವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಈರುಳ್ಳಿ ಬೆಳೆ ಬೆಳೆದಿದ್ದು, ಕಳೆದ ಆಗಸ್ಟ್‍ನಲ್ಲಿ ಸುರಿದ ಮಳೆಯಿಂದಾಗಿ ಬಹಳಷ್ಟು ರೈತರು ನಷ್ಟ ಅನುಭವಿಸಿದ್ದು, ಈ ಭಾಗದಲ್ಲಿ ಕೆಲವು ರೈತರಿಗೆ ಮಾತ್ರ ಬೆಳೆ ಪರಿಹಾರ ನೀಡಲಾಗಿದ್ದು,

ಅರ್ಹರಿಗೆ ಪರಿಹಾರ ದೊರತಿಲ್ಲ. ಬೆಳೆನಷ್ಟ ಅನುಭವಿಸಿದ ರೈತರಿಗೆ ಅನ್ಯಾಯವಾಗದಿರಲಿ ಎಂದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದೇವರಾಜ್, ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಬೆಳೆ ಪರಿಹಾರ ವಿತರಿಸಲಾಗಿದೆ. ದ್ಯಾಮವ್ವನಹಳ್ಳಿ ಪಂಚಾಯಿತಿಯಲ್ಲಿ 32 ರೈತರಿಗೆ ಬೆಳೆ ಪರಿಹಾರ ವಿತರಿಸಲಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 1130 ರೈತರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 450 ರೈತರಿಗೆ ಪರಿಹಾರ ಪಾವತಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಬೆಳೆ ಪರಿಹಾರಕ್ಕೆ ಅರ್ಹರಾದ ರೈತರು ಹಾಗೂ ಅನರ್ಹರ ಪಟ್ಟಿಯನ್ನು ತಮ್ಮ ಇಲಾಖೆಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಪರಿಹಾರ ಬಾರದ ರೈತರಿಗೆ ಹಿಂಬರಹ/ತಿಳುವಳಿಕೆ ಪತ್ರದ ಮೂಲಕ ರೈತರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ರೈತ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಸಭೆಗೆ ತಿಳಿಸಿದರು.
ಬೆಳೆ ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತರಿಗೂ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ದೊರೆಯಬೇಕು. ಬೆಳೆ ವಿಮೆ ಕಟ್ಟಿಸಿಕೊಂಡ ವಿಮಾ ಕಂಪನಿಗಳು ಹಾಗೂ ಪ್ರತಿನಿಧಿಗಳು ರೈತರ ಪೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ರೈತ ಮುಖಂಡ ಹೊರಕೇರಪ್ಪ, ಬಸವರೆಡ್ಡಿ, ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ ದೂರಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ.ಸವಿತಾ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು,  ಜಿಲ್ಲೆಯ ರೈತ ಮುಖಂಡರು, ರೈತರು ಇದ್ದರು.

 

 

Share This Article
error: Content is protected !!
";