ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಪಾಲಿಕೆ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ 10 ಮಹಾನಗರ ಪಾಲಿಕೆಗಳ ಸುಮಾರು 25,000ಕ್ಕೂ ಹೆಚ್ಚು ನೌಕರರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ, ಅವರ ಸಮಸ್ಯೆಗಳಿಗೆ ಕಿವಿಗೊಡದೆ ಉದ್ಧಟತನ ಪ್ರದರ್ಶನ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಜನವಿರೋಧಿ ಧೋರಣೆ ಪ್ರದರ್ಶನ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಅವರು ವಾಗ್ದಾಳಿ ಮಾಡಿದರು.
ಸರ್ಕಾರಿ ನೌಕರರಿಗೆ ನೀಡಲಾಗಿರುವ 7ನೇ ವೇತನ ಆಯೋಗದ ಸೌಲಭ್ಯ ನೀಡಲು ಪಾಲಿಕೆಗಳ ಸಿಬ್ಬಂದಿಗೂ ಆರ್ಥಿಕ ಇಲಾಖೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು.
ರಾಜ್ಯ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿಸೂಚನೆಯನ್ನು ಪ್ರಕಟಿಸಬೇಕು.
ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆಜಿಐಡಿ ಮತ್ತು ಜಿಪಿಎಫ್ ಸೌಲಭ್ಯವನ್ನು ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಜಾರಿಗೊಳಿಸಬೇಕು.
ಆರೋಗ್ಯ ಸೌಲಭ್ಯದ ಜ್ಯೋತಿ/ಆರೋಗ್ಯ ಸಂಜೀವಿನಿ ಯೋಜನೆಯನ್ನು ಪಾಲಿಕೆ ಸಿಬ್ಬಂದಿಗೆ ನೀಡಬೇಕು. ಪ್ರತಿ ವರ್ಷ ಕ್ರೀಡಾ ಕಾರ್ಯಕ್ರಮ ಆಯೋಜಿಸಬೇಕು. ವಿವಿಧ ವೃಂದದ ಹುದ್ದೆಗಳಿಗೆ ವೃಂದವಾರು ಮುಂಬಡ್ತಿ ನೀಡಬೇಕು ಅವರು ಒತ್ತಾಯಿಸಿದರು.
ಪಾಲಿಕೆ ನೌಕರರು ಮುಂದಿಟ್ಟಿರುವ ಈ ಎಲ್ಲಾ ಬೇಡಿಕೆಗಳು ಅತ್ಯಂತ ನ್ಯಾಯಯುತವಾಗಿದ್ದು, ನಮ್ಮ ರಾಜ್ಯದ ಆರ್ಥಿಕ ಇಂಜಿನ್ ಗಳಾಗಿರುವ ನಗರಗಳ ನಿರ್ವಹಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಪಾಲಿಕೆ ಸಿಬ್ಬಂದಿಗಳ ಸೇವೆ, ಪರಿಶ್ರಮ ರಾಜ್ಯ ಸರ್ಕಾರಿ ನೌಕರರಿಗಿಂತ ಯಾವುದೇ ರೀತಿಯಲ್ಲೂ ಕಡಿಮೆಯಲ್ಲ.
ಆದ್ದರಿಂದ ಪಾಲಿಕೆ ನೌಕರರನ್ನು ಸರ್ಕಾರಿ ನೌಕರರಿಗೆ ಸಮನಾಗಿ ನಡೆಸಿಕೊಳ್ಳುವುದು, ಸರ್ಕಾರಿ ನೌಕರರಿಗೆ ಇರುವ ಎಲ್ಲ ಸೌಲಭ್ಯಗಳನ್ನು ಪಾಲಿಕೆ ನೌಕರರಿಗೂ ವಿಸ್ತರಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕೂಡಲೇ ಪಾಲಿಕೆ ನೌಕರರನ್ನು ಭೇಟಿಯಾಗಿ ಕಾಲಮಿತಿಯಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಬೇಕು ಮತ್ತು ಪಾಲಿಕೆ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಮರಳುವಂತೆ ಮನವೊಲಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.