ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖೈದಿಗಳಿಗೆ ಐಟಂ ಸಾಂಗ್ ಭಾಗ್ಯ, ಐಷಾರಾಮಿ ಜೀವನ ಗ್ಯಾರೆಂಟಿ ನೀಡಿದ ಕಾಂಗ್ರೆಸ್ ಸರ್ಕಾರ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರೇ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇಪಿಸ್ಟ್ ಗಳು, ಸ್ಮಗ್ಲರ್ ಗಳು, ಉಗ್ರರಿಗೆ ಜೈಲಿನ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಟಿವಿ, ಮೊಬೈಲು, ಇಂಟರ್ನೆಟ್, ಐಟಂ ಸಾಂಗ್ ಸೇರಿದಂತೆ ಎಗ್ಗಿಲ್ಲದೆ ಮೋಜು ಮಸ್ತಿ ಸರಬರಾಜಾಗುತ್ತಿದೆಯಲ್ಲ ಸ್ವಾಮಿ, ಇದರ ಬಗ್ಗೆ ತಮಗೇನಾದರೂ ಗೊತ್ತಿದೆಯೋ ಅಥವಾ ಎಂದಿನಂತೆ “ಗೊತ್ತಿಲ್ಲ” ಎಂದು ಜಾರಿಕೊಳ್ಳುತ್ತೀರೋ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಈ ಅಭದ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ಮಂತ್ರಿಗಳ ಮೇಲೆ ಹಿಡಿತವಿಲ್ಲ. ಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಒಟ್ಟಿನಲ್ಲಿ ಯಾವ ಇಲಾಖೆಯೂ ನೆಟ್ಟಗಿಲ್ಲ ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.

