ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಮಾಡುತ್ತಿರುವ ಅನ್ಯಾಯದಿಂದ ಮಕ್ಕಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪದವೀಧರರು ಪರದಾಡುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
ಒಂದೆಡೆ, ಇವರ ದುರಾಡಳಿತ, ಭ್ರಷ್ಟಾಚಾರಗಳಿಂದ ಲಕ್ಷಾಂತರ ಪದವೀಧರರಿಗೆ ಉದ್ಯೋಗಾವಕಾಶ ಇಲ್ಲದಂತಾಗಿದ್ದರೆ, ಇನ್ನೊಂದೆಡೆ ಸದ್ದಿಲ್ಲದೇ ಶಾಲೆಗಳ ವಿಲೀನದ ಹೆಸರಿನಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿಗಳನ್ನು ತೀರಾ ಹದಗೆಡಿಸಲಾಗಿದ್ದು, ಕಳೆದ 2 ವರ್ಷಗಳಲ್ಲಿ 1.60 ಲಕ್ಷ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೂಡ ಬಾಕಿ ಉಳಿಸಿಕೊಳ್ಳಲಾಗಿದೆ. ಶೇ. 60ರಷ್ಟು ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ಸಿಗದೆ ಪರದಾಡುವಂತಾಗಿದೆ ಎಂದು ಅವರು ದೂರಿದ್ದಾರೆ.
ಈ ಕಾಂಗ್ರೆಸ್ ಸರ್ಕಾರದ ಆದ್ಯತೆಗಳು ಜನಪರವಾಗಿಲ್ಲ ಎನ್ನುವುದಕ್ಕೆ ಈ ವಾಸ್ತವ ಅಂಕಿ-ಅಂಶಗಳೇ ಸಾಕ್ಷಿ ಹೇಳುತ್ತಿದ್ದು, ರಾಜ್ಯದ ಬಡವರು, ರೈತರು ಮತ್ತು ವಿದ್ಯಾರ್ಥಿಗಳ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

