ಕುರ್ಚಿ ಕಿತ್ತಾಟದಲ್ಲಿ ರೈತರನ್ನ ಮರೆತಿರುವ ಕಾಂಗ್ರೆಸ್ ಸರ್ಕಾರ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುರ್ಚಿ ಕಿತ್ತಾಟದಲ್ಲಿ ಅನ್ನದಾತರನ್ನ ಸಂಪೂರ್ಣವಾಗಿ ಮರೆತಿರುವ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ
ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಹೃದಯಹೀನ ಸರ್ಕಾರಕ್ಕೆ ಅನ್ನದಾತನ ಬದುಕಿಗಿಂತ ಅಧಿಕಾರವೇ ಮುಖ್ಯವಾಯಿತಾ?

ಕರ್ನಾಟಕದ ಇತಿಹಾಸದಲ್ಲಿ ರೈತರ ನೋವಿಗೆ ಸ್ಪಂದಿಸದ ಈ ರೀತಿಯ ಸಂವೇದನಾರಹಿತ ಸರ್ಕಾರ ಕಂಡರಲಿಲ್ಲ. ಕೊಟ್ಟ ಮಾತಿನಂತೆ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿ, ಸೂಕ್ತ ಪರಿಹಾರ ನೀಡಬೇಕಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇಂದು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದೆ. ರೈತರ ಬದುಕು ನಾಶವಾದರೂ ಪರವಾಗಿಲ್ಲ, ನಮ್ಮ ಕುರ್ಚಿ ಭದ್ರವಾಗಿರಲಿ ಎನ್ನುವಂತಿದೆ ಸಿದ್ದರಾಮಯ್ಯ ಸರ್ಕಾರದ ನಡೆ! ಆಗಿದೆ ಎಂದು ಅಶೋಕ್ ವಾಗ್ದಾಳಿ ಮಾಡಿದರು.

- Advertisement - 

ಗುರ್ಲಾಪುರದಲ್ಲಿ ಪ್ರತಿಭಟನಾ ನಿರತ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘೋರ ದುರಂತ ಸಂಭವಿಸಿತು. ಆದರೆ, ಈ ಹೃದಯಹೀನ ಸರ್ಕಾರದ ಯಾವ ಮಂತ್ರಿಯೂ ರೈತನ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ.

ಇಷ್ಟಕ್ಕೂ ಸಕ್ಕರೆ ಸಚಿವರು ಎಲ್ಲಿದ್ದಾರೆ?, ಕೃಷಿ ಸಚಿವರು ಏನು ಮಾಡುತ್ತಿದ್ದಾರೆ?, ಜಿಲ್ಲಾ ಉಸ್ತುವಾರಿ ಸಚಿವರುಗಳು ಯಾಕೆ ತಲೆ ಮರೆಸಿಕೊಂಡಿದ್ದಾರೆ?, ತಮ್ಮದೇ ಸರ್ಕಾರದ ಅಸಡ್ಡೆಯಿಂದಾಗಿ ಜೀವನ್ಮರಣದ ಹೋರಾಟದಲ್ಲಿದ್ದ ರೈತನಿಗೆ ಸಾಂತ್ವನ ಹೇಳುವಷ್ಟು ಕನಿಷ್ಠ ಮಾನವೀಯತೆಯೂ ಇಲ್ಲದ ಮಂತ್ರಿಗಳು ಈ ರಾಜ್ಯಕ್ಕೆ ಬೇಕೇ?

- Advertisement - 

ರೈತರ ಬೇಡಿಕೆಯಂತೆ ಮೆಕ್ಕೆ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲು ನೀವು ಯಾರ ಆದೇಶಕ್ಕಾಗಿ ಕಾಯುತ್ತಿದ್ದೀರಿ ಸಿಎಂ ಸಿದ್ದರಾಮಯ್ಯ ನವರೇ? ನಿಮಗೆ ನಿಮ್ಮ ದೆಹಲಿ ಹೈಕಮಾಂಡ್‌ನಿಂದ ಸೂಚನೆ ಬರಬೇಕೇ?

ರಾಹುಲ್ ಗಾಂಧಿ ಮತ್ತು ರಣದೀಪ್ ಸುರ್ಜೇವಾಲಾ ಅವರ ಅನುಮತಿ ಪತ್ರ ಬೇಕೇ? ರೈತರ ಜೀವ ಉಳಿಸಲು ಹೈಕಮಾಂಡ್‌ನ ಆದೇಶ ಬೇಕೆ? ನನ್ನ 30 ವರ್ಷದ ರಾಜಕಾರಣದಲ್ಲಿ ಇಂತಹ ರೈತ ವಿರೋಧಿ, ಸಂವೇದನಾರಹಿತ ಸರ್ಕಾರವನ್ನು ನಾನು ಕಂಡಿಲ್ಲ.

ಬರ ಪರಿಹಾರವಿಲ್ಲ, ಹೆಚ್ಚುವರಿ ಬೆಂಬಲ ಬೆಲೆ ಇಲ್ಲ, ಸಕಾಲಕ್ಕೆ ಖರೀದಿ ಕೇಂದ್ರಗಳ ಆರಂಭ ಇಲ್ಲ, ನೀರಾವರಿ ಯೋಜನೆಗಳಿಲ್ಲ, ಸಂಕಷ್ಟದಲ್ಲಿರುವ ರೈತನಿಗೆ ಸ್ಪಂದನೆಯಿಲ್ಲ.

ಇದು ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ಸಾಧನೆ!
ರೈತರ ಆಕ್ರಂದನವನ್ನು ನಿರ್ಲಕ್ಷಿಸಿ ಕುರ್ಚಿ ಭದ್ರಪಡಿಸಿಕೊಳ್ಳಲು ಹೊರಟಿರುವ ಈ ಸರ್ಕಾರವನ್ನು ಬುಡಮೇಲು ಮಾಡುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ವಿಪಕ್ಷ ನಾಯಕ ಅಶೋಕ್ ಎಚ್ಚರಿಸಿದ್ದಾರೆ.

 

 

Share This Article
error: Content is protected !!
";