ಖೋ ಖೋ  ವಿಶ್ವ ಕಪ್ ಗೆದ್ದ ಕ್ರೀಡಾಪಟುಗಳನ್ನು ಅಪಮಾನಿಸಿದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖೋ ಖೋ
, ಕಬ್ಬಡಿಯಂತಹ ಕ್ರೀಡೆಗಳನ್ನು ಬೆಳೆಸುಳಿಸುವುದು ಈ ನೆಲದ ಸಂಸ್ಕೃತಿಯನ್ನು ಉಳಿಸಿದಂತೆ. ವಿಶ್ವ ಖೋ ಖೋ  ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ಭಾರತವನ್ನು ಗೆಲ್ಲಿಸಿಕೊಂಡು ಬಂದ ತಂಡದಲ್ಲಿದ್ದು ಕನ್ನಡ ನಾಡಿಗೆ ಕೀರ್ತಿ ತಂದ ಬಿ.ಚೈತ್ರಾ ಮತ್ತು ಎಂ.ಕೆ.ಗೌತಮ್ ರವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಬಹುಮಾನದ 5 ಲಕ್ಷ ರೂ.ಗಳ ಮೊತ್ತ ಕ್ರೀಡಾ ಪಟುಗಳನ್ನು ಉತ್ತೇಜಿಸುವ ಬದಲು ಅಪಮಾನಿಸಿದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಗ್ರಾಮೀಣ ಹಿನ್ನೆಲೆಯಿಂದ ಬಂದು ವಿಶ್ವಮಟ್ಟದಲ್ಲಿ ಭಾರತವನ್ನು ಗೆಲ್ಲಿಸಿದ ಈ ಇಬ್ಬರು ಯುವ ಪ್ರತಿಭಾವಂತ ಸಾಧಕ ಕ್ರೀಡಾಪಟುಗಳನ್ನು ಕ್ರೀಡಾ ಕ್ಷೇತ್ರದ ಧ್ರುವತಾರೆಗಳಂತೆ ಗುರುತಿಸಿ ಕರ್ನಾಟಕದ ಕ್ರೀಡಾಪಟುಗಳೆಲ್ಲರೂ ಪ್ರೇರಣೆಗೊಳ್ಳುವಂತೆ ಗೌರವಿಸಬೇಕಿತ್ತು. ಆದರೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ 2.5 ಕೋಟಿ ರೂ.ಗಳಿಗೂ ಹೆಚ್ಚು ಬಹುಮಾನ ಘೋಷಿಸಿದ್ದಾರೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೇವಲ 5 ಲಕ್ಷ ರೂ. ಘೋಷಿಸಿ ಕೈ ತೊಳೆದುಕೊಂಡಿರುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದಲ್ಲಿ ಸಾಧಕರನ್ನು ಗುರುತಿಸುವ ಔದಾರ್ಯ, ಕಳಕಳಿ ಹಾಗೂ ಬದ್ಧತೆ ಇಲ್ಲದಿರುವುದನ್ನು ಸಾಕ್ಷೀಕರಿಸುತ್ತದೆ ಎಂದು ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಚೈತ್ರಾ ಅವರು ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆಯಿಂದ ಬಂದ ಅಪ್ರತಿಮ ಭರವಸೆಯ ಪ್ರತಿಭೆ, ಗೌತಮ್ ಕೂಡ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಬಲ್ಲ ಸಾಧಕ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಖೋ ಖೋ ಹಾಗೂ ಇತರ ದೇಸಿಯ ಕ್ರೀಡೆಗಳ ಬಗ್ಗೆ ಅಸಡ್ಡೆ ಹೊಂದಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಅವರ ಸಲಹೆಯ ಮೇರೆಗೆ ಇಂತಹ ನಿರ್ಣಯ ಕೈಗೊಂಡಿರುವುದಾಗಿ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ಒಳಗಣ್ಣು ತೆರೆದು ಖೋ ಖೋ ಪ್ರತಿಭೆಗಳಿಗೆ ಹೆಚ್ಚಿನ ಬಹುಮಾನ ಮೊತ್ತ ಹಾಗೂ ಇತರ ಸವಲತ್ತುಗಳನ್ನು ಘೋಷಿಸಿ ಬಹುಮಾನ ಘೋಷಿಸುವಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";