ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪುಡಿಗಾಸು 5 ಲಕ್ಷ ರೂ. ಘೋಷಿಸಿ ಚೊಚ್ಚಲ ಖೋ ಖೋ ವಿಶ್ವಕಪ್‌ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಖೋ ಖೋ ಆಟಗಾರರಿಗೆ ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅವಮಾನಿಸಿರುವುದು ಸರಿಯಲ್ಲ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಪಕ್ಕದ ಕೇರಳ ರಾಜ್ಯಕ್ಕೆ ಸದಾ ಮಿಡಿಯುವ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಮನ ಕನ್ನಡಿಗರಾದ ಬಿ. ಚೈತ್ರಾ ಹಾಗೂ ಎಂ.ಕೆ ಗೌತಮ್ ಅವರ ಅಮೋಘ ಸಾಧನೆಗೆ ಮಿಡಿಯದಿರುವುದು ವಿಪರ್ಯಾಸ ಎಂದು ಜೆಡಿಎಸ್ ಬೇಸರ ವ್ಯಕ್ತಪಡಿಸಿದೆ.
ಮಹಾರಾಷ್ಟ್ರ ಆಟಗಾರರಿಗೆ ಅಲ್ಲಿನ ಸರ್ಕಾರ ₹2.5 ಕೋಟಿ ಪ್ರೋತ್ಸಾಹಧನ ಮತ್ತು ಎ ಕೆಟಗರಿ ಉದ್ಯೋಗ ಘೋಷಿಸಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಜಮ್ಮು ಕಾಶ್ಮೀರ ಸರ್ಕಾರಗಳೂ ತಮ್ಮ ರಾಜ್ಯದ ಆಟಗಾರರಿಗೆ ಸೂಕ್ತ ಗೌರವ ನೀಡಿವೆ.
ಆದರೆ, ಸಿದ್ದರಾಮಯ್ಯ ಸರ್ಕಾರ ಕಾಟಾಚಾರಕ್ಕೆ ತಲಾ 5 ಲಕ್ಷ ರೂ. ನೀಡಿ ಗಮನಾರ್ಹ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ವಿಶ್ವ ಕಪ್ ವಿಜೇತ ತಂಡದ ಕನ್ನಡಿಗರ ಐತಿಹಾಸಿಕ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಸೂಕ್ತ ಪ್ರೋತ್ಸಾಹಧನ ತಕ್ಷಣ ಪ್ರಕಟಿಸಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸಿದೆ.