ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ 2015 ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಬಕಾರಿ ಪರವಾನಗಿಗಳಿಗೆ ಮುಂದ್ರಾಂಕ ಶುಲ್ಕ ವಿಧಿಸಲು ಅವಕಾಶ ಇಲ್ಲದಿದ್ದರೂ, ತನ್ನ ಬರಿದಾಗಿದ್ದ ಬೊಕ್ಕಸ ತುಂಬಿಸಿಕೊಳ್ಳಲು ಅಬಕಾರಿ ಸನ್ನದುದಾರರಿಗೆ ಮುದ್ರಾಂಕ ಶುಲ್ಕ ವಿಧಿಸಿ ಕೋಟ್ಯಂತರ ರೂಪಾಯಿಗಳನ್ನು ವಸೂಲಿ ಮಾಡಿದ್ದ ಪರಿಣಾಮ
ಅಂದು ಸಂಗ್ರಹಿಸಿದ್ದ ಅಷ್ಟೂ ಹಣಕ್ಕೆ 9% ಬಡ್ಡಿ ದರದಲ್ಲಿ ಹಿಂದಿರುಗಿಸುವಂತೆ ಉಚ್ಛ ನ್ಯಾಯಾಲಯ ಆದೇಶ ನೀಡಿರುವುದು ಅನುಭವಿ ಹಣಕಾಸು ಮಂತ್ರಿ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಸಿದ್ದರಾಮಯ್ಯನವರ ಆಡಳಿತದ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
‘ಹಿರಿಯಕ್ಕನ ಚಾಳಿ ಮನೆ ಮಂದಿಗೆ‘ ಎನ್ನುವಂತೆ ಸಿದ್ದರಾಮಯ್ಯನವರನ್ನು ಹಿಂಬಾಲಿಸಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಬಕಾರಿ ಇಲಾಖೆಯ ಸರಣೀ ಭ್ರಷ್ಟಾಚಾರ ಹಾಗೂ ಅಕ್ರಮಗಳಲ್ಲಿ ಭಾಗಿಯಾಗಿರುವುದನ್ನು ಸಾಕ್ಷೀಕರಿಸುತ್ತಿದೆ.
ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಎಡವಟ್ಟು ನಿರ್ಧಾರದಿಂದಾಗಿ ಇಂದು ಸಾರ್ವಜನಿಕರ ತೆರಿಗೆಯ ಹಣದಿಂದ ದಂಡ ಕಟ್ಟುವ ಸ್ಥಿತಿ ಎದುರಾಗಿರುವುದು ದುರ್ದೈವವೇ ಸರಿ ಎಂದು ಅವರು ತಿಳಿಸಿದ್ದಾರೆ.