ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರ ಸಂವಿಧಾನದಂತೆ ಆಡಳಿತ ನಡೆಸುತ್ತಿಲ್ಲ, ಬದಲಿಗೆ ತೊಘಲಕ್ ಸಂವಿಧಾನ ಜಾರಿಯಲ್ಲಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಡೆಯುತ್ತಿಲ್ಲ! ಬದಲಿಗೆ ತೊಘಲಕ್ ಸಂವಿಧಾನ ಜಾರಿಯಲ್ಲಿದೆ ಎಂದು ರಾಜ್ಯ ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದೆ.
ಜೆಡಿಎಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎನ್ನುವುದಕ್ಕೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ತೋರಿರುವ  ದುರ್ವರ್ತನೆ ಇದಕ್ಕೆ ಸಾಕ್ಷಿ.

ಕೇಂದ್ರದ ಸಂಪುಟ ದರ್ಜೆ ಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಏಕವಚನದಿಂದ ಕೆಟ್ಟ ಪದಗಳನ್ನು ಬಳಸಿ ಪತ್ರ ಬರೆದು ಅಹಂಕಾರ, ದರ್ಪ ತೋರಿರುವ ಪೊಲೀಸ್ ಅಧಿಕಾರಿಯ ನಡೆ ಅತ್ಯಂತ ಖಂಡನೀಯ ಎಂದು ಜೆಡಿಎಸ್ ಕಿಡಿಕಾರಿದೆ.

ಕೇಂದ್ರ ಮಂತ್ರಿಗಳ ಬಗ್ಗೆಯೇ ಈ ರೀತಿ ವರ್ತಿಸಿರುವ  ಭ್ರಷ್ಟ ಅಧಿಕಾರಿ ಚಂದ್ರಶೇಖರ್, ಅಧಿಕಾರ ಬಳಸಿ ಜನಸಾಮಾನ್ಯರನ್ನು ಎಷ್ಟು ಸುಲಿಗೆ ಮಾಡಿರಬಹುದು ಎಂದು ಜೆಡಿಎಸ್ ಪ್ರಶ್ನಿಸಿದೆ.

ಆರೋಪಗಳ ಬಗ್ಗೆ ಉತ್ತರಿಸುವಾಗ ತಾನೊಬ್ಬ ಐಪಿಎಸ್ ಅಧಿಕಾರಿ ಎಂಬುದನ್ನು ಮರೆತು ಕೊಳಕುಮನಸ್ಸನ್ನು ಹೊರ ಜಗತ್ತಿಗೆ ಚಂದ್ರಶೇಖರ್ ಪ್ರದರ್ಶಿಸಿದ್ದಾರೆ ಎಂದು ಜೆಡಿಎಸ್ ದೂರಿದೆ.

ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿರುವ ಭ್ರಷ್ಟ ಅಧಿಕಾರಿ ಚಂದ್ರಶೇಖರ್ ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ದಾಖಲೆಗಳ‌ಸಹಿತ ಮಾಧ್ಯಮಗಳಿಗೆ ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವರನ್ನು ಉಲ್ಲೇಖಿಸುವಾಗ ಪೊಲೀಸ್ ಅಧಿಕಾರಿ ಬಳಸಿರುವ ಭಾಷೆ ಮತ್ತು ವ್ಯಕ್ತಿಯನ್ನು ನಿರ್ಧಿಷ್ಟವಾಗಿ ಹಾಗೇ ಹೋಲಿಸಿ ಅಗೌರವ ತೋರಿ, ಅವರ ಘನತೆಗೆ ಧಕ್ಕೆ ತಂದಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿ ಚಂದ್ರಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

 

- Advertisement -  - Advertisement - 
Share This Article
error: Content is protected !!
";