ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಯಥಾ ರಾಜ, ತಥಾ ಪ್ರಜಾ‘ ಎಂಬ ಮಾತಿನಂತೆ, ಸ್ವತಃ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರ, ಲೂಟಿಗೆ ಇಳದಿರುವಾಗ, ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು ಪ್ರಾಮಾಣಿಕತೆ ಮೆರೆಯಲು ಸಾಧ್ಯವೇ? ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಆರೋಪಿಸಿದರು.
ಈ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರು ಅಕ್ರಮಗಳ ಪರಿಣಾಮವಾಗಿ, ರಾಜ್ಯ ಸಂಪಾದಿಸಿದ್ದ ಹೆಸರು, ಗೌರವ ರಾಷ್ಟ್ರ ಮಟ್ಟದಲ್ಲಿ ಹರಾಜಾಗುತ್ತಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಪೊಲೀಸರು ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿ, ಮಾದಕ ದ್ರವ್ಯ ಕಾರ್ಖಾನೆ ಇರುವುದನ್ನು ಪತ್ತೆ ಹಚ್ಚಿದ್ದರು. ಈಗ ಗುಜರಾತ್ ಅಧಿಕಾರಿಗಳು ಬೆಂಗಳೂರು ಆರ್‌ಟಿಒ ಕರ್ಮಕಾಂಡವನ್ನು ಬಯಲಿಗೆ ತಂದಿದ್ದಾರೆ ಎಂದು ಅವರು ವಾಗ್ದಾಳಿ ಮಾಡಿದರು.
ಬೆಂಗಳೂರಿನ ಆರ್‌ಟಿಒ ಕಚೇರಿಗಳಲ್ಲಿ ಯಾವುದೇ ತಪಾಸಣೆ ನಡೆಸದೆ ಫಿಟ್ನೆಸ್ ಪ್ರಮಾಣಪತ್ರ ನೀಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಸರ್ಕಾರಕ್ಕೂ ಶತಾಯಗತಾಯ ಹಣ ಮಾಡಬೇಕು. ಅದೇ ಹಾದಿಯಲ್ಲಿ ಸರ್ಕಾರಿ ಇಲಾಖೆಗಳೂ ದಾಪುಗಾಲಿಕ್ಕಿವೆ.
ರಾಜ್ಯ ಸರ್ಕಾರದ ಮುಂದೆ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳು ನಾಡು ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ಸಲ್ಲಿಸುವ ಗುರಿ ಇದೆ. ಅದಕ್ಕಾಗಿ ರಾಜ್ಯದಲ್ಲಿ ಅಕ್ರಮ, ಭ್ರಷ್ಟಾಚಾರಗಳನ್ನು ಸರ್ಕಾರವೇ ಮುಂದೆ ನಿಂತು ಪ್ರಾಯೋಜಿಸುತ್ತಿದೆ.
ಹೊರ ರಾಜ್ಯದ ವಾಹನಗಳಿಗೆ ಈ ರೀತಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಿ, ಅದರಿಂದ ಯಾರ ಪ್ರಾಣಕ್ಕಾದರೂ ಅಪಾಯ ಉಂಟಾದರೆ ಅದರ ಜವಾಬ್ದಾರಿ ಆರ್‌ಟಿಒ ಅಧಿಕಾರಿಗಳು ಹೊರುತ್ತಾರೋ? ಅಥವಾ ರಾಜ್ಯ ಸರ್ಕಾರ ಹೊರುತ್ತದೋ?
ಈ ಕಮಿಷನ್, ಸುಲಿಗೆ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಕಳೆಯುವ ಗುರಿಯನ್ನು ಹೊಂದಿ, ಅದರತ್ತಲೇ ಸಾಗುವಂತೆ ಕಾಣುತ್ತಿದೆ ಎಂದು ರವಿ ಅವರು ಟೀಕಾಪ್ರಹಾರ ಮಾಡಿದರು.

