ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಿಸಾನ್ ಸಮ್ಮಾನ್ ಯೋಜನೆಯಡಿ ಮೋದಿ ಜೀ ಅವರ 6000 ರೂ. ಜತೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ನೀಡುತ್ತಿದ್ದ 4000 ರೂಗಳನ್ನು ನಿಲ್ಲಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಕರ್ನಾಟಕ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ
ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವರದಾನವಾಗಿದ್ದ ಜನಪ್ರಿಯ ‘ರೈತ ವಿದ್ಯಾನಿಧಿ‘ ಯೋಜನೆಯನ್ನು ಮೂಲೆಗೆ ತಳ್ಳಿರುವುದು ಈ ಸರ್ಕಾರಕ್ಕೆ ಬಡ ಹಾಗೂ ಅನ್ನದಾತರ ಮಕ್ಕಳ ಮೇಲಿರುವ ಅಸಡ್ಡೆತನವನ್ನು ಸಾಕ್ಷೀಕರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಕೃಷಿಕ ಕುಟುಂಬದ ಲಕ್ಷಾಂತರ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಮರುಜಾರಿಗೊಳಿಸದಿದ್ದರೆ ನಾಡಿನ ಕೋಟ್ಯಂತರ ರೈತ ಕುಟುಂಬಗಳ ಶಾಪಕ್ಕೆ ಈ ಸರ್ಕಾರ ಗುರಿಯಾಗಲಿದೆ,
ಅಲ್ಲದೇ ಬಿಜೆಪಿ ಸರ್ಕಾರದ ಯೋಜನೆಗಳು ಎಂಬ ಕಾರಣಕ್ಕೆ ಜನಪರ ಯೋಜನೆಗಳನ್ನು ಮೂಲೆಗೆ ತಳ್ಳುವ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ನಾಡಿನ ಜನಸಾಮಾನ್ಯರು ಮೂಲೆಗೆ ತಳ್ಳುವ ಕಾಲ ದೂರವಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

