ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ ಕಟ್ಟಲೂ ದುಡ್ಡಿಲ್ಲದಷ್ಟು ಪಾಪರ್ ಆಗಿದೆ ರಾಜ್ಯ ಸರ್ಕಾರ! ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ವಿವಿಧ ಎಸ್ಕಾಂಗಳಿಗೆ 7,467 ಕೋಟಿ ರೂಪಾಯಿ ದ್ಯುತ್ ಬಿಳಿ ಬಾಕಿ ಉಳಿಸಿಕೊಂಡಿದ್ದು, ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ ಕಟ್ಟಲೂ ಸಹ ಹಣವಿಲ್ಲದಂತಹ ಶೋಚನೀಯ ಸ್ಥಿತಿಗೆ ಕರ್ನಾಟಕದ ಹಣಕಾಸು ಪರಿಸ್ಥಿತಿಯನ್ನು ಹಾಳುಗೆಡವಿದೆ ಈ ನಾಯಾಲಕ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ವಿದ್ಯುತ್ ಸಂಪರ್ಕ ಇಲ್ಲದೆ ಹಲವಾರು ಕಡೆಗಳಲ್ಲಿ ಮೊಬೈಲ್ ಟಾರ್ಚು ಬಳಸಿ ಸಿಬ್ಬಂದಿಗಳು ಕೆಲಸ ಮಾಡುವ ಪರಿಸ್ಥಿತಿ ಇದ್ದರೆ, ಅನೇಕ ಕಡೆ ಕಂಪ್ಯೂಟರ್ ಇಲ್ಲದೆ ಅನ್ ಲೈನ್ ಸೇವೆ ನೀಡಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ವಿಪಕ್ಷಗಳು ಟೀಕೆ ಮಾಡಿದ ಕೂಡಲೇ ರಾಜ್ಯದ ಹಣಕಾಸು ಪರಿಸ್ಥಿತಿ ಸುಭದ್ರವಾಗಿದೆ ಎಂದು ತಿಪ್ಪೆ ಸರಿಸುವ ಕೆಲಸ ಮಾಡುತ್ತೀರಲ್ಲ, ಎಲ್ಲವೂ ಸರಿ ಇದ್ದಿದ್ದರೆ ಸರ್ಕಾರಿ ಕಚೇರಿಗಳಲ್ಲಿ ಕರೆಂಟ್ ಬಿಲ್ ಪಾವತಿ ಮಾಡಲೂ ಸಾಧ್ಯವಾಗದಷ್ಟು ಅನುದಾನದ ಕೊರತೆ ಯಾಕೆ ಎದುರಾಗಿದೆ? ಸರ್ಕಾರಿ ಕಚೇರಿಗಳು ಎಸ್ಕಾಂಗಳಿಗೆ 7,467 ಕೋಟಿ ರೂಪಾಯಿ ವಿದ್ಯುತ್ ಬಿಳಿ ಬಾಕಿ ಏಕೆ ಉಳಿಸಿಕೊಂಡಿದೆ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಅಂಚಿನಲ್ಲಿರುವ ತಾವು ಈ ರೀತಿ ದುರಾಡಳಿತದಿಂದ ತಮ್ಮ ಹೆಸರಿಗೆ ತಾವೇ ಯಾಕೆ ಮಸಿ ಬಳಿದುಕೊಳ್ಳುತ್ತಿದ್ದೀರಿ? ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ ಸತ್ಯಾಂಶವನ್ನು ಜನರ ಮುಂದಿಡಿ. ತಮ್ಮ ಪ್ರತಿಷ್ಠೆಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ ಇನ್ನಷ್ಟು ಹಾಳುಗೆಡುವ ಬದಲು ರಾಜೀನಾಮೆ ಕೊಟ್ಟು ಗೌರವದಿಂದ ನಿರ್ಗಮಿಸಿ ಎಂದು ಅವರು ತಾಕೀತು ಮಾಡಿದ್ದಾರೆ.