ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಷರಿಯಾ ಕಾನೂನನ್ನು ಅನಧಿಕೃತವಾಗಿ ಜಾರಿಗೆ ತಂದಿದೆ. ಹಿಂದೂ ಆಚಾರ-ವಿಚಾರಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ದ್ವೇಷಿಸುತ್ತಿದೆ. ಒಂದೆಡೆ ಹಿಜಾಬ್ ಧರಿಸಲು ಪ್ರೋತ್ಸಾಹ ನೀಡುವ ಸರ್ಕಾರ ಮತ್ತೊಂದೆಡೆ ಪರೀಕ್ಷೆಯ ತಪಾಸಣೆ ನೆಪದಲ್ಲಿ ಮಾಂಗಲ್ಯವನ್ನು ತೆಗೆಯಲು, ಜನಿವಾರ ತುಂಡರಿಸಲು ಪ್ರಚೋದಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ನ್ಯಾಯಾಲಯ ಸಮಾನ ವಸ್ತ್ರಸಂಹಿತೆಗೆ ಆದೇಶ ನೀಡಿದರೂ ಸಹ ಸಿದ್ದರಾಮಯ್ಯ ಸಾಹೇಬರು ಸೇರಿದಂತೆ ಕಾಂಗ್ರೆಸ್ ನಾಯಕರು ಹಿಜಾಬ್ ಹಕ್ಕುಗಳ ಬಗ್ಗೆ ಮಾತನಾಡಿದರು, ಬೀದಿಗಿಳಿದರು. ಆದರೆ ಇಂದು ಜನಿವಾರ ತುಂಡರಿಸಿದಾಗ ಅವರೆಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಇಬ್ಬಗೆ ಧೋರಣೆ ಕುರಿತು ಸ್ವತಃ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೇ ಬಹಿರಂಗವಾಗಿ ಟೀಕಿಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಜಾತಿಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ವಿಭಜಿಸುವುದು, ಹಿಂದೂ ಸಂಪ್ರದಾಯವನ್ನು ಮೂಢನಂಬಿಕೆ ಹೆಸರಿನಲ್ಲಿ ಅವಹೇಳನ ಮಾಡುವುದು, ಹಿಂದೂ ಆಚರಣೆ-ಸಂಪ್ರದಾಯಕ್ಕೆ ನಿರ್ಬಂಧ ಹೇರುವುದು, ಹಿಂದೂ ಧರ್ಮದ ಅವಹೇಳನ ಮಾಡುವವರಿಗೆ ಪ್ರಶಸ್ತಿ ನೀಡಿ ಗೌರವಿಸುವುದನ್ನು ಕಾಂಗ್ರೆಸ್ ನಿರಂತರವಾಗಿ ನಡೆಸುತ್ತಾ ಬಂದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಸಂಘಟಿತ ಹಿಂದೂ ಸಮಾಜ ಉತ್ತರ ನೀಡಲಿದೆ ಎಂದು ಬಿಜೆಪಿ ಎಚ್ಚರಿಸಿದೆ.
ಚಾಣಕ್ಯನ ಶಿಖೆಗೆ ಕೈಹಾಕಿದ ನಂದರ ಕಥೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ತಿಳಿಸಿದೆ.