ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಯಿಂದಾಗಿ ಮೆಕ್ಕೆಜೋಳ ಬೆಳೆದ ರೈತರು ಕಂಗಾಲಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಖರೀದಿ ಕೇಂದ್ರಗಳು ತೆರೆಯದೆ ರೈತರು ಕ್ವಿಂಟಾಲ್‌ಗೆ ಬರೋಬ್ಬರಿ 400 ರಿಂದ 450 ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ನಮ್ಮ ರೈತರ ಶ್ರಮದ ಫಲ ದಲ್ಲಾಳಿಗಳ ಪಾಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಮೆಕ್ಕೆಜೋಳ ಬೆಳೆದ ರೈತರ ಕಷ್ಟ ತಮಗೆ ಕಾಣಿಸುತ್ತಿಲ್ಲವೇ? ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಯಾರ ಆದೇಶಕ್ಕಾಗಿ ಕಾಯುತ್ತಿದ್ದೀರಿ? ಎಂದು ಅವರು ಪ್ರಶ್ನಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಟ್ವೀಟ್ ಆದೇಶಕ್ಕಾಗಿ ಕಾಯುತ್ತಿದ್ದೀರಾ? ಕೆಎಂಎಫ್ ಮೂಲಕ ಮೆಕ್ಕೆಜೋಳ ಖರೀದಿಗೆ ಆದೇಶ ನೀಡಿ ತಿಂಗಳು ಕಳೆದರೂ ನಿಮ್ಮ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಈ ‘ಭಂಡ ಬಾಳು‘ ಇನ್ನೆಷ್ಟು ದಿನ ಸ್ವಾಮಿ? ಕೂಡಲೇ ಎಚ್ಚೆತ್ತುಕೊಳ್ಳಿ, ಇಲ್ಲವಾದರೆ ಈ ರೈತ ವಿರೋಧಿ ಆಡಳಿತಕ್ಕೆ ತಕ್ಕ ಉತ್ತರ ನೀಡಲು ರೈತರು ಸಿದ್ಧರಾಗಿದ್ದಾರೆ. ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ನೆರವಿಗೆ ಧಾವಿಸಿ ಎಂದು ಅವರು ತಾಕೀತು ಮಾಡಿದ್ದಾರೆ.

