ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಆರೋಗ್ಯ ಕ್ಷೇತ್ರಕ್ಕೆ ಸಂಪೂರ್ಣ ಗ್ರಹಣ ಹಿಡಿದಿದ್ದು, ಬಡವರ ಜೀವಕ್ಕೆ ಗ್ಯಾರಂಟಿ ಇಲ್ಲವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಹೃದಯ ಸಂಬಂಧಿ ಚಿಕಿತ್ಸೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಆರೇಳು ತಿಂಗಳಿಂದ ವೈದ್ಯಕೀಯ ಸೇವಾ ಸೌಲಭ್ಯಗಳು, ಶಸ್ತ್ರಚಿಕಿತ್ಸೆಗಳು ಬಡವರಿಗೆ ಮರೀಚಿಕೆಯಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಸಂಸದ ಡಾ. ಸಿ.ಎನ್ ಮಂಜುನಾಥ್ ಅವರು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ “ಸೇವೆ ಮೊದಲು, ಶುಲ್ಕ ಆಮೇಲೆ” ಎಂಬ ಧ್ಯೇಯ ವಾಕ್ಯದಡಿ ಮಧ್ಯಮ ವರ್ಗದವರಿಗೆ ಕನಿಷ್ಟ ಶುಲ್ಕದಲ್ಲಿ ಹಾಗೂ ಸಾವಿರಾರು ಬಡವರಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತಿತ್ತು.
ಯಾರಿಗೂ ವಿಳಂಬವಾಗದಂತೆ ಉತ್ಕೃಷ್ಟ ದರ್ಜೆಯ ಚಿಕಿತ್ಸೆ ನೀಡುವ ಮೂಲಕ ಜಯದೇವ ಸಂಸ್ಥೆ ತನ್ನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿತ್ತು.
ಬಡವರಿಗೆ ಸಂಜೀವಿನಿಯಾಗಿದ್ದ ಜಯದೇವದಲ್ಲಿ ಈಗ ಸಕಾಲಕ್ಕೆ ಸಮರ್ಪಕವಾಗಿ ಯಾವುದೇ ಸೇವೆಗಳು ದೊರೆಯುತ್ತಿಲ್ಲ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಆರೇಳು ತಿಂಗಳು ಕಾಯಬೇಕಾದ ಅನಿವಾರ್ಯತೆ ಉದ್ಭವಿಸಿದೆ ಎಂಬ ದೂರುಗಳು ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ, ಹೊಣೆಗೇಡಿತನ ಹಾಗೂ ಆರೋಗ್ಯ ಕ್ಷೇತ್ರದ ಕಡೆಗಣನೆಯನ್ನು ಜಗಜ್ಜಾಹೀರುಗೊಳಿಸಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ದುಬಾರಿ ಚಿಕಿತ್ಸಾ ವೆಚ್ಛ ಭರಿಸಲಾಗದೆ ಜಯದೇವ ಸಂಸ್ಥೆಯನ್ನು ನಂಬಿಕೊಂಡಿರುವ ಬಡ ಜನರ ಜೀವದ ಗತಿಯೇನು? ರಾಜ್ಯದಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸರಣಿ ಸಾವುಗಳ ಬಳಿಕವೂ ಎಚ್ಚೆತ್ತುಕೊಳ್ಳದ ಸಿದ್ದರಾಮಯ್ಯ ಸರ್ಕಾರ ಇನ್ನಾದರೂ ಗಮನ ಹರಿಸಿ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹದಗೆಟ್ಟಿರುವ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಜೆಡಿಎಸ್ ಪಕ್ಷ ಆಗ್ರಹಿಸಿದೆ.