ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಯುಗಾದಿ ಹಬ್ಬ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವ ಹಿನ್ನಲೆಯಲ್ಲಿ ಬಹಳಷ್ಟು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಕಾರಣ ಬಂದ್ ಕೈ ಬಿಡಲು ನಿರ್ಧಾರ ಮಾಡಲಾಗಿದೆ.
ನಗರದ ಕನ್ನಡ ಜಾಗೃತ ಭವನದಲ್ಲಿ ನೆಡೆದ ಸಭೆಯಲ್ಲಿ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರು ಮಾರ್ಚ್ 22ರ ಶನಿವಾರದಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ನೀಡಿರುವ ಬಂದ್ ಕುರಿತು ಚರ್ಚಿಸಿದರು.
ನಾಡು ನುಡಿ ವಿಚಾರವಾಗಿ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನ ಸಂಘ ಸಂಸ್ಥೆಗಳು ಹಿಂಜರಿದ ಉದಾಹರಣೆ ಎಂದಿಗೂ ಇಲ್ಲ, ಆದರೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 21ರಿಂದ ಆರಂಭವಾಗಲಿದ್ದು , ನಾವು ಬಂದ್ ಗೆ ಕರೆ ನೀಡಿದರೆ, ಶಾಲಾ ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗುತ್ತದೆ ಅಲ್ಲದೇ ಪರೀಕ್ಷೆ ಕೇಂದ್ರಗಳಿಗೆ ಮಕ್ಕಳು ತೆರಳಲು ಕಷ್ಟವಾಗುತ್ತದೆ ಜೊತೆಗೆ ನಮ್ಮ ದೊಡ್ಡಬಳ್ಳಾಪುರ ಜನತೆ ಬಹುತೇಕ ನೇಕಾರಿಕಾ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ,ಯುಗಾದಿ ಹಬ್ಬದ ಸಂದರ್ಭದಲ್ಲಿ ಬಂದ್ ಮಾಡುವುದರಿಂದ ನೇಕಾರಿಕೆಯ ಮೇಲೆ ಪೆಟ್ಟು ಬೀಳುತ್ತದೆ ಅಲ್ಲದೇ ಸ್ಥಳೀಯ ವ್ಯವಹಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆಯೆಂದು ಚರ್ಚೆಯಲ್ಲಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗಾಗಿ ಸರ್ವ ಸಂಘಟನೆಗಳ ಮುಖಂಡರು, ಪ್ರಮುಖರು ಒಮ್ಮತದಿಂದ ಮಾರ್ಚ್ 22ರಂದು ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಾಂಕೇತಿಕವಾಗಿ ಘೋಷಣೆ ಕೂಗುವ ಮೂಲಕ ಕರ್ನಾಟಕ ಬಂದ್ ಕೈ ಬಿಡಲು ನಿರ್ಧಾರ ಮಾಡಿದರು. ಸಭೆಯಲ್ಲಿ ತಾಲೂಕಿನ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರಮುಖರು ಹಾಜರಿದ್ದರು.