ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಹತ್ವದ ಕೊಡುಗೆಗಳು
ನಾಡಿನ ಮುಖ್ಯಮಂತ್ರಿಯ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯ ಮೈಸೂರು ನಗರದಲ್ಲಿ ನಾಲ್ವಡಿಯವರ ಬಗ್ಗೆ ನೀಡಿರುವ ಪ್ರತಿಕ್ರಿಯೆ ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಸಿದ್ಧರಾಮಯ್ಯನವರು ನಾಲ್ವಡಿಯವರಿಗಿಂತ ಹತ್ತು ಪಟ್ಟು ಹೆಚ್ಚು ಕೊಡುಗೆ ನೀಡಿದ್ದಾರಂತೆ! ಎನ್ನುವುದೇ ಮುರ್ಖತನದ ಹೇಳಿಕೆಯಾಗಿದೆ.
ಇಂದು ಒಬ್ಬ ರಾಜಕಾರಣಿ ಪ್ರತಿಭಾವಂತ ಮತ್ತು ಪ್ರಜ್ಞಾವಂತ ಜನಪ್ರತಿನಿಧಿಯಾಗಲು ಒಂದು ದಶಕದ ಸಮಯ ಸಾಕಾಗುವುದಿಲ್ಲ. ಆದರೆ, ಅವಿವೇಕಿಯಾಗಲು ಕೇವಲ ಒಂದು ನಿಮಿಷ ಅಥವಾ ಹೇಳಿಕೆ ಸಾಕು ಎಂಬುದಕ್ಕೆ ಈ ಘಟನಾವಳಿ ಜೀವಂತ ಉದಾಹರಣೆಯಾಗಿದೆ.
ಕಳೆದ ಏಳು ವರ್ಷಗಳಿಂದ ನಾನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿದ್ದ ಯುವ ರಾಜಕಾರಣಿಗಳಲ್ಲಿ ಡಾ.ಯತೀಂದ್ರ ಕೂಡಾ ಒಬ್ಬರು. ಜಂಟಲ್ ಮನ್ ರಾಜಕಾರಣಿ ಎಂದುಕೊಂಡಿದ್ದ ಈ ವ್ಯಕ್ತಿ ಈ ರೀತಿಯ ಅಜ್ಞಾನಿ ಎಂದು ಗೊತ್ತಿರಲಿಲ್ಲ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತಾಗಿ ಯಾರಾದರೂ ಯತೀದ್ರಗೆ ಪಾಠ ಮಾಡಿ, ಮೌನವಾಗಿರುವಂತೆ ಹೇಳುವುದು ಸೂಕ್ತ. ಈ ಕೆಳಗಿನ ಅಂಶಗಳನ್ನು ಮತ್ತು ಈ ನಾಡಿಗೆ ನಾಲ್ವಡಿಯವರು ನೀಡಿದ ಕೊಡುಗೆಗಳನ್ನು ಅವರ ಗಮನಕ್ಕೆ ತರುವುದು ಒಳಿತು. ಮಂಡ್ಯ ಜಿಲ್ಲೆಯ ಓರ್ವ ರೈತನ ಮಗನಾಗಿ ಜನಿಸಿದ ನಾನು, ಕಲ್ಲುಕರಗುವ ಸಮಯ ಎನ್ನಲಾದ ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ಎಬ್ಬಿಸಿ ಕೇಳಿದರೂ ಸಹ, ನಾಲ್ವಡಿಯವರ ಬಗ್ಗೆ ಒಂದು ಗಂಟೆ ಉಪನ್ಯಾಸ ನೀಡಬಲ್ಲೆ.
ಏಕೆಂದರೆ, ನನ್ನ ಅಜ್ಜ, ಅಪ್ಪ ತಿಂದ ಅನ್ನದಲ್ಲಿ ಮತ್ತು ಕುಡಿದ ನೀರಿನಲ್ಲಿ ನಾಲ್ವಡಿಯವರ ಕೊಡುಗೆಯ ಋಣಗಳಿವೆ. ಅದೇ ಋಣದ ಪ್ರಜ್ಞೆ ನನ್ನೊಳಗೂ ಸಹ ಇಂದಿಗೂ ಜೀವಂತವಾಗಿದೆ.
ನಾಲ್ವಡಿಯವರ ತಂದೆ ಹತ್ತನೇ ಚಾಮರಾಜ ಒಡೆಯರ್, 1895 ರಲ್ಲಿ ಕೊಲ್ಕತ್ತ ನಗರಕ್ಕೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಾರ್ಷಿಕ ವರಮಾನದ ಶುಲ್ಕ ಪಾವತಿಸಲು ಹೋಗಿದ್ದಾಗ, ಅಲ್ಲಿಯೇ ನಿಧನರಾದರು. ಆ ವೇಳೆಯಲ್ಲಿ ನಾಲ್ವಡಿಯವರು ಹನ್ನೊಂದು ವರ್ಷದ ಬಾಲಕನಾಗಿದ್ದರು.
1902 ರಲ್ಲಿ ಹದಿನೆಂಟು ವರ್ಷ ತುಂಬಿದಾಗ, ಮೈಸೂರು ಸಂಸ್ಥಾನದ ದೊರೆಯಾಗಿ ಅಧಿಕಾರ ಸ್ವೀಕರಿಸಿದರು. ಆ ವೇಳೆಗೆ ಅವರಿಗೆ ಬ್ರಿಟಿಷರ ಮೂಲಕ ಉತ್ತಮ ಶಿಕ್ಷಣ ದೊರೆತಿತ್ತು. ಬ್ರಿಟಿಷ್ ಅಧಿಕಾರಿಗಳ ಮಕ್ಕಳು ಓದುತ್ತಿದ್ದ ಶಾಲೆಯಲ್ಲಿ ನಾಲ್ವಡಿ ಮತ್ತು ಮಿರ್ಜಾ ಇಸ್ಮಾಯಿಲ್ ಇಬ್ಬರೂ ಓದಿದ್ದರು. ಜೊತೆಗೆ ಸಹಪಾಠಿಗಳಾಗಿದ್ದರು. ಶಿಕ್ಷಣದ ಜೊತೆಗೆ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ನಾಲ್ವಡಿಯವರಿಗೆ ಅಪಾರ ಆಸಕ್ತಿಯಿತ್ತು.
ಈ ಕಾರಣದಿಂದಾಗಿ ಅವರು ಇಡೀ ಭಾರತದಲ್ಲಿ ಮೈಸೂರು ಸಂಸ್ಥಾನವನ್ನು ಅಭಿವೃದ್ಧಿ ಹೊಂದಿದ ಸಂಸ್ಥಾನವನ್ನಾಗಿ ರೂಪಿಸಿದರು. ಇಂದು ಕರ್ನಾಟಕ ರಾಜ್ಯವು ಭಾರತದ ಅಭಿವೃದ್ಧಿ ಹೊಂದಿದ ರಾಜ್ಯವಾಗಿರುವುದಕ್ಕೆ, ತಿರುಪತಿ ತಿಮ್ಮಪ್ಪ, ಮಂತ್ರಾಲಯದ ರಾಘವೇಂದ್ರ ಅಥವಾ ಧರ್ಮಸ್ಥಳದ ಮಂಜುನಾಥ ಇವರು ಕಾರಣರಲ್ಲ. ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ.
ಭಾರತದಲ್ಲಿ ಪ್ರಥಮವಾಗಿ ದೇವದಾಸಿ ಪದ್ಧತಿಯ ಮೇಲೆ ನಿಷೇಧ ಹೇರಿ ದೇವಾಲಯಗಳಲ್ಲಿ ನೃತ್ಯ ಮಾಡುವುದನ್ನು ತೊಡೆದು ಹಾಕಿದರು. ಕಲಾವಿದರಿಗೆ ಮಾಸಾಶನ ಕಲ್ಪಿಸಿಕೊಟ್ಟರು. ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಪರಿಚಯಿಸಿದರು. ದಲಿತರಿಗೆ ಶಿಕ್ಷಣಕ್ಕೆ ಮುಕ್ತ ಅವಕಾಶ ಕಲ್ಪಿಸಿದರು.
ಚಿತ್ರದುರ್ಗದ ಹಿರಿಯೂರು ಬಳಿ 1906ರಲ್ಲಿ ವಾಣಿ ವಿಲಾಸ ಸಾಗರ ಹಾಗೂ. 1932 ರಲ್ಲಿ ಮಂಡ್ಯದ ಕನ್ನಂಬಾಡಿ ಬಳಿ ಕೆ.ಆರ್.ಎಸ್ ಜಲಾಶಯ ನಿರ್ಮಿಸಿದರು. ಹಣದ ಕೊರತೆಯುಂಟಾದಾಗ, ತಮ್ಮ ಕುಟುಂಬದ 158 ಕೆ.ಜಿ ಚಿನ್ನ ಮತ್ತು ವಜ್ರಾಭರಣಗಳನ್ನು ಬಾಂಬೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಜಲಾಶಯಕ್ಕೆ ಹಣ ವಿನಿಯೋಗಿಸಿದರು.
ಕೆ.ಆರ್.ಎಸ್ ಜಲಾಶಯದ ನೀರು ಮೈಸೂರು ಅರಮನೆಗೆ ಹರಿಯಲಿಲ್ಲ. ಮಂಡ್ಯದ ಮಳೆಯಾಶ್ರಿತ ಭೂಮಿಗೆ ಹರಿದು, ಅಲ್ಲಿನ ರೈತರ ಬದುಕನ್ನು ಹಸನು ಮಾಡಿತು.

1907ರಲ್ಲಿ ಪ್ರಥಮವಾಗಿ ಪ್ರಜಾಪ್ರತಿನಿಧಿಗಳ ಸಭೆಯನ್ನು ಮೈಸೂರು ಜಗನ್ಮೋಹನ ಪ್ಯಾಲೆಸ್ ಅರಮನೆಯಲ್ಲಿ ಪ್ರಾರಂಭಿಸಿದರು. ಅದು ಇಂದಿನ ಶಾಸಕಾಂಗ ಸಭೆಯಾಗಿ ಪರಿವರ್ತನೆ ಹೊಂದಿದೆ. ಆಸಕ್ತರು ಕಳೆದ ವಾರ ಬಿಡುಗಡೆಯಾದ ವಿಧಾನ ಪರಿಷತ್ ಇತಿಹಾಸದ ಸಾಕ್ಷ್ಯ ಚಿತ್ರವನ್ನು ಗಮನಿಸಬಹುದು. ವಿಧಾನಸಭಾ ಸಚಿವಾಲಯ ನಿರ್ಮಾಣದ ಈ ಚಿತ್ರದ ಇತಿಹಾಸ ಕುರಿತ ಚಿತ್ರಕಥೆ ರಚನೆಯಲ್ಲಿ ನಾನೂ ಒಬ್ಬನಾಗಿ ಪಾಲ್ಗೊಂಡಿದ್ದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಶ್ರೀಮಂತರಿಂದ ಕಟ್ಟಡಗಳನ್ನು ದಾನವಾಗಿ ಪಡೆದು, ಅವರ ಕುಟುಂಬದ ಹೆಸರಿನಲ್ಲಿ ಪ್ರಾಥಮಿಕ ಆರೋಗ್ರಕೇಂದ್ರ ಮತ್ತು ಪಶುವೈದ್ಯಕೀಯ ಕೇಂದ್ರಗಳನ್ನು ತೆರೆದರು. ಇಂದು ನನ್ನೂರು ಕೊಪ್ಪದಲ್ಲಿ ಕಾಳೇಗೌಡ ಸರ್ಕಾರಿ ಆಸ್ಪತ್ರೆ ಮತ್ತು ಚಿಕ್ಕೇಗೌಡ ಪಶುವೈದ್ಯಕೀಯ ಕೇಂದ್ರ ಸ್ಥಾಪನೆಯಾಗಲು, ನಾಲ್ವಡಿಯವರು ಮತ್ತು ಪ್ರಜಾಪ್ರತಿನಿಧಿಗಳ ಸಭೆಯ ಸದಸ್ಯರಾಗಿದ್ದ ಎಸ್.ಎಂ.ಕೃಷ್ಣ ಅವರ ತಂದೆ ಸೋಮನಹಳ್ಳಿ ಮಲ್ಲಯ್ಯನವರು ಮುಖ್ಯ ಕಾರಣ ಕರ್ತರಾಗಿದ್ದಾರೆ.
ಸಂಸ್ಥಾನದ ಹುದ್ದೆಗಳಲ್ಲಿ ದಲಿತರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ಪ್ರಥಮವಾಗಿ ನಾಲ್ವಡಿಯವರು ಜಾರಿಗೆ ತಂದರು. ಈ ಕ್ರಮವನ್ನು ವಿರೋಧಿಸಿ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಹುದ್ದೆಗೆ ರಾಜೀನಾಮೆ ನೀಡಿದಾಗ ನಾಲ್ವಡಿಯವರು ವಿಚಲಿತರಾಗಲಿಲ್ಲ. ಬ್ರಿಟಿಷರ ಮನವೊಲಿಸಿ ಸಂಸ್ಥಾನಕ್ಕೆ ಬ್ರಾಹ್ಮಣ ಸಮುದಾಯದ ದಿವಾನರು ಬೇಡ ಎಂದು ಹೇಳಿ ಮಿರ್ಜಾ ಇಸ್ಮಾಯಿಲ್ ಅವರನ್ನು ದಿವಾನರನ್ನಾಗಿ ನೇಮಕ ಮಾಡಿಕೊಂಡು ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದರು.
1916 ರಲ್ಲಿ ಕನ್ನಡದ ನೆಲದಲ್ಲಿ ಪ್ರಥಮವಾಗಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ತು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆಗೆ ಕಾರಣಕರ್ತರಾದರು.
ಬೆಂಗಳೂರು ಗಂಧದ ಎಣ್ಣೆ ಕಾರ್ಖಾನೆ ಅಂದರೆ, ಈಗಿನ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಮತ್ತು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಾಲ್ವಡಿಯವರ ಅವಧಿಯಲ್ಲಿ ಆರಂಭಗೊಂಡವು.
ಕರ್ನಾಟಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಗಕ್ಕೆ ಬೆಂಗಳೂರಿನ ಮಲ್ಲೇಶ್ವರಂ ಬಳಿ ಜೆಮ್ ಶೆಡ್ ಟಾಟಾ ಅವರಿಗೆ ನಾಲ್ಕನೂರು ಎಕರೆ ಭೂಮಿಯನ್ನು ಉಚಿತವಾಗಿ ನೀಡಿ, ಇಂದಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ಕಾರಣಕರ್ತರಾದರು. ಹೀಗೆ ನಾಲ್ವಡಿಯವರ ನೂರಾರು ಕೊಡುಗೆಗಳನ್ನು ನಾವು ಸ್ಮರಿಸಬಹುದು.
ಇಂತಹ ಒಂದು ಕನಿಷ್ಠ ಸಾಮಾನ್ಯ ಪ್ರಜ್ಞೆಯನ್ನು ಮೈಸೂರು ನಗರದ ನಿವಾಸಿಯಾಗಿ ಯತೀಂದ್ರ ಸಿದ್ಧರಾಮಯ್ಯ ಒಳಗೊಳ್ಳವುದು ಭವಿಷ್ಯದ ದೃಷ್ಟಿಯಿಂದ ಒಳಿತು.
ಕನ್ನಡದ ನೆಲದಲ್ಲಿ ದಲಿತ ಪ್ರಜ್ಞೆಯನ್ನು ರೂಪಿಸಿದ ಮೊದಲ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್. ಅಷ್ಟು ಮಾತ್ರವಲ್ಲದೆ, ಸಾಂಪ್ರದಾಯಕ ಹಿಂದೂ ಸಮುದಾಯದ ವಿರೋಧದ ನಡುವೆಯೂ, ಇಸ್ಲಾಂ ಸಮುದಾಯದ ಮಿರ್ಜಾ ಇಸ್ಮಾಯಿಲ್ ಅವರನ್ನು ದಸರಾ ಜಂಬೂ ಸವಾರಿಯಲ್ಲಿ ಆನೆಯ ಮೇಲೆ ಕೂರಿಸಿಕೊಂಡು ಹೋದ ಧೀಮಂತ ವ್ಯಕ್ತಿತ್ವ ಅವರದು.
ನಾಲ್ವಡಿಯವರನ್ನು ಮೀರಿಸಲು ಈಗಿನ ರಾಜಕಾರಣಿಗಳು ನೂರು ಜನ್ಮ ತಾಳಿದರೂ ಸಹ, ಅವರ ಕೊಡುಗೆಗಳನ್ನು ಮೀರಿಸಲು ಸಾಧ್ಯವಿಲ್ಲ.
ಲೇಖನ-ಲೇಖನ-ರಾಘವೇಂದ್ರ ಎ, ಕಾರ್ಯದರ್ಶಿ, ಬಿಜೆಪಿ, ಹಿರಿಯೂರು ಮಂಡಲ.

