ಸ್ವಾತಂತ್ರ್ಯ ಆಂದೋಲಕ್ಕೆ ಕರ್ನಾಟಕದ ಬುಡಕಟ್ಟುಗಳ ಕೊಡುಗೆ ಅಪಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾತಂತ್ರ್ಯ ಆಂದೋಲಕ್ಕೆ ಕರ್ನಾಟಕದ ಬುಡಕಟ್ಟು ಜನಾಂಗಗಳ ಕೊಡುಗೆಭಾರತ ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ನಾವು ಸ್ವಾತಂತ್ರ್ಯ ಗಳಿಸಿಕೊಂಡು 78 ವರ್ಷಗಳು‌ ತುಂಬಿ 79 ನೇ ವರ್ಷಾಚರಣೆ ಮಾಡುತ್ತಿದ್ದೇವೆ. ನಾವು ಪಡೆದಿರುವುದು ಬ್ರಿಟಿಷರ ರಾಜಕೀಯ ದಾಸ್ಯದಿಂದ ವಿಮೋಚನೆಯೇ ಹೊರತು ಸಾಮಾಜಿಕ ಬಿಡುಗಡೆಯಲ್ಲ. ಸ್ವಾತಂತ್ರ್ಯ ಎಂಬ ಪರಿಕಲ್ಪನೆಯನ್ನು ನಾವು ಮರುವ್ಯಾಖ್ಯಾನ ಮಾಡಿಕೊಳ್ಳಬೇಕಾಗಿದೆ. ಕೇವಲ ರಾಜಕೀಯ ವಿಮೋಚನೆಯಷ್ಟೇ ಸ್ವಾತಂತ್ರ್ಯವಲ್ಲ.

1857 ರ ಸಿಪಾಯಿ ದಂಗೆಯಿಂದ ಪ್ರಾರಂಭಿಸಿ, 1917 ರ ಚಂಪಾರಣ್ ಚಳವಳಿಯಲ್ಲಿ ಗಾಂಧೀಜಿಯವರ ಪ್ರವೇಶಿಕೆಯೊಂದಿಗೆ ವೇಗೋತ್ಕರ್ಷ ಪಡೆದು, 1947 ಆಗಸ್ಟ್ ವರೆಗೆ ಸ್ವಾತಂತ್ರ್ಯ ಹೋರಾಟ ನಡೆಯಿತೆಂದು ನಮ್ಮನ್ನು ನಂಬಿಸಲಾಗಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯ ನಂತರ ನಿಜವಾದ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತೆಂದು ರಾಷ್ಟ್ರೀಯವಾದಿ ಇತಿಹಾಸಕಾರರು ಚರಿತ್ರೆಯ ಏಕಮುಖಿ ಪುಟಗಳನ್ನು ರೂಪಿಸಿದ್ದಾರೆ. ‌1757 ರಲ್ಲಿ ನಡೆದ ಪ್ಲಾಸಿ ಯುದ್ಧದಲ್ಲಿ ಬ್ರಿಟಿಷರು ಬಂಗಾಳವನ್ನು ವಶಪಡಿಸಿಕೊಂಡ ನಂತರ ಬಂಗಾಳದ ಮರುವಶಕ್ಕಾಗಿ ಬ್ರಿಟಿಷ್ ವಿರುದ್ಧದ ಹೋರಾಟಗಳು ನಡೆದಿವೆ. ಇವೆಲ್ಲವೂ ರಾಜಕೀಯ ಆಡಳಿತದ ಯಂತ್ರಾಂಗ ಅಥವಾ ಅಧಿಕಾರ ದಂಡವನ್ನು ಪಡೆದುಕೊಳ್ಳಲು ನಡೆಸಿರುವ ಹೋರಾಟಗಳು.

- Advertisement - 

ಸಮಾಜೋ-ಧಾರ್ಮಿಕ ಯಾಜಮಾನ್ಯಕ್ಕೆ ಸಿಲುಕಿ ದಾಸ್ಯ ಅನುಭವಿಸಿದ ಜನರ ಸ್ವಾತಂತ್ರ್ಯದ ಪರಿಕಲ್ಪನೆಯೇ ಬೇರೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ನಾವು ರಾಜಕೀಯವಾಗಿ ವ್ಯಾಖ್ಯಾನಿಸಿಕೊಂಡಂತೆಯೇ ಸನಾತನ ಹಿಂದೂ ಸಾಮ್ರಾಜ್ಯಶಾಹಿಯನ್ನು ಕೂಡಾ ವ್ಯಾಖ್ಯಾನಿಸಿಕೊಳ್ಳುವ ಅಗತ್ಯವಿದೆ.

ಆಗಸ್ಟ್ 1947 ಕ್ಕೆ ಭಾರತೀಯರ ಪಾಲಿಗೆ ಬ್ರಿಟಿಷ್ ವಸಾಹತುಶಾಹಿ ಯಜಮಾನಿಕೆ ಕೊನೆಗೊಂಡಿತೇ? 1949 ನವೆಂಬರ್ 26 ರಂದು ಸಂವಿಧಾನ ಜಾರಿಯಾದ ಬಳಿಕವೂ ಈಗಲೂ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಯಜಮಾನಿಕೆಯ ಆಡಳಿತದ ರಚನೆಗಳನ್ನು ನಾವು ಮುಂದುವರಿಸಿಲ್ಲವೇ?

- Advertisement - 

ಸಂವಿಧಾನದ ಸಮರ್ಪಣಾ ಸಭೆಯಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರು, “ಜನವರಿ 26, 1950ರಂದು ನಾವು ವೈರುಧ್ಯಗಳ ಬದುಕಿಗೆ ಕಾಲಿಡಲಿದ್ದೇವೆ.‌ ರಾಜಕೀಯದಲ್ಲಿ, ನಮಗೆ ಸಮಾನತೆಯಿರುತ್ತದೆ ಆದರೆ ಸಾಮಾಜಿಕ ಹಾಗೂ ಆರ್ಥಿಕ ಸಂರಚನೆಗಳಲ್ಲಿ ಅಸಮಾನತೆಯಿರುತ್ತದೆ. ಒಬ್ಬ ಮನುಷ್ಯ ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸುತ್ತಲೇ ಹೋಗುತ್ತಿರುತ್ತೇವೆ. ಈ ವೈರುಧ್ಯಗಳ ಬದುಕನ್ನು ಎಷ್ಟು ದಿನ ಹೀಗೇ ಮುಂದುವರೆಸಿಕೊಂಡು ಹೋಗುತ್ತೇವೆ? ನಮ್ಮ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಸಮಾನತೆಯ ನಿರಾಕರಣೆಯನ್ನು ಎಷ್ಟು ದಿನ ಹೀಗೇ ಮುಂದುವರೆಸುತ್ತೇವೆ? ಬಹಳ ಕಾಲ ಹೀಗೇ ಇದು ಮುಂದುವರೆಯಿತೆಂದರೆ ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನೇ ತೊಂದರೆಗೆ ಸಿಲುಕಿಸುತ್ತಿದ್ದೇವೆ ಎಂದೇ ಅರ್ಥ. ನಾವು ಆದಷ್ಟು ಬೇಗನೇ ಈ ವೈರುಧ್ಯವನ್ನು ನಿವಾರಿಸಿಕೊಳ್ಳಬೇಕು. ಇಲ್ಲವಾದರೆ ಅಸಮಾನತೆಯಿಂದ ನರಳುತ್ತಿರುವವರು ಈ ಸಂವಿಧಾನ ರಚನಾ ಸಭೆಯು ಇಷ್ಟು ಶ್ರಮವಹಿಸಿ ಕಟ್ಟಿರುವ ಪ್ರಜಾಪ್ರಭುತ್ವದ ಸೌಧವನ್ನೇ ಪುಡಿಗುಟ್ಟಿಬಿಡುತ್ತಾರಷ್ಟೆ” ಎಂಬ ಎಚ್ಚರಿಕೆ ನೀಡಿದ ಮಾತು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುತ್ತಿದೆಯಲ್ಲವೇ?

1857 ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟವೆಂದು ರಾಷ್ಟ್ರೀಯವಾದಿ ಇತಿಹಾಸಕಾರರು ತಪ್ಪಾಗಿ ದಾಖಲಿಸಿದ್ದಾರೆ. ಮಂಗಲ್ ಪಾಂಡೆ ಎಂಬ ಬ್ರಾಹ್ಮಣ ಸಿಪಾಯಿಯು ಬ್ರಿಟಿಷರ ವಿರುದ್ಧ ಬಂಡೆದ್ದನೆಂಬ ಕಾರಣವನ್ನು ಮುಂದೊಡ್ಡುವ ಮೂಲಕ ಬ್ರಾಹ್ಮಣರೇ ಭಾರತದ ಸ್ವಾತಂತ್ರ್ಯ ಹೋರಾಟದ ಮೂಲ ರೂವಾರಿಗಳೆಂದು ನಂಬಿಸಲು ಮನುವಾದಿಗಳು ರೂಪಿಸಿದ ರಾಜಕೀಯ ಪಿತೂರಿ ಇದು.

1857 ರ ಸಿಪಾಯಿ ದಂಗೆಯ ಎಂಟು ವರ್ಷಗಳ ಮೊದಲೇ 1849 ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಕಾಡಿನಲ್ಲಿ ಬೇಡರ ಏಳು ಮಂದಿ ಯುವಕರು ಭೂಗತರಾಗಿದ್ದುಕೊಂಡು ಸ್ಥಳೀಯರನ್ನು ಸಂಘಟಿಸುವ ಮೂಲಕ ಬ್ರಿಟಿಷರ ವಿರುದ್ಧ ದಂಗೆ ಎದ್ದರು. 1857 ರಲ್ಲಿ ಸಿಪಾಯಿ ದಂಗೆ ಕಾಲದಲ್ಲಿಯೇ ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಹಲಗಲಿ ಬೇಡರ ದಂಗೆ ನಡೆದಿದೆ. 1849 ರ ದೊಡ್ಡೇರಿ ಬೇಡರ ದಂಗೆ ಮತ್ತು 1857 ರಲ್ಲಿ ನಡೆದ ಹಲಗಲಿ ಬೇಡರ ದಂಗೆಗಳನ್ನೇಕೆ ಪ್ರಥಮ ಸ್ವಾತಂತ್ರ್ಯ ಹೋರಾಟಗಳೆಂದು ಗುರುತಿಸಲಾಗಲಿಲ್ಲ? ಹಾಗೆ ಗುರುತಿಸಲಿಲ್ಲ ಯಾಕೆಂದರೆ ದೊಡ್ಡೇರಿ ಬೇಡರು ಮತ್ತು ಹಲಗಲಿಯ ಬೇಡರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿರುತ್ತಾರೆ.

ಸಿಪಾಯಿ ದಂಗೆಗಿಂತಲೂ ದೊಡ್ಡೇರಿ ಬೇಡರ ದಂಗೆ ಮಹತ್ವದ್ದೆಂದು ಡಾ.ಬಿ.ಎಲ್.ವೇಣು ಅವರು “ದುರ್ಗದ ಬೇಡರ್ದಂಗೆ” (1849 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಂಗ್ರಾಮ) ಎಂಬ ಐತಿಹಾಸಿಕ ಕಾದಂಬರಿ ಬರೆದಿದ್ದಾರೆ. ಈ ಕಾದಂಬರಿಯು ತುಮಕೂರು- ಚಿತ್ರದುರ್ಗ ಜಿಲ್ಲೆಗಳ ಪ್ರಥಮ ಜಿಲ್ಲಾಧಿಕಾರಿಯಾಗಿ ದುರ್ಗದ ಬೇಡರ ದಂಗೆಯನ್ನು ಸ್ವತಃ ಹತ್ತಿಕ್ಕಿದ ಬ್ರಿಟಿಷ್ ಅಧಿಕಾರಿ, ಮೇಜರ್ ಜನರಲ್ Richard Stewart Dobs (1835- 1860) ಬರೆದಿರುವ “Reminiscences of Life in Mysore, South Africa and Burmah” ಎಂಬ ಕೃತಿಯನ್ನು ಆಧರಿಸಿ ಬರೆಯಲಾಗಿದೆ.

(ಡಾಬ್ಸ್ ನ ಅನುಭವ ಕಥನದ ಈ ಕೃತಿಯ ಮೈಸೂರು ಭಾಗದ ನೆವರಿಕೆಗಳನ್ನು ಪ್ರೊ.ಎಂ.ಜಿ.ರಂಗಸ್ವಾಮಿ ಅವರು, “ಮೇಜರ್ ಜನರಲ್ ರಿಚರ್ಡ್ ಸ್ಟೀವರ್ಟ್ ಡಾಬ್ಸ್ ಆಡಳಿತದ ನೋಟಗಳು” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಹಲಗಲಿ ಬೇಡರ ಹೋರಾಟವು ಬ್ರಿಟಿಷರ ವಿರುದ್ಧ ನಡೆದ ಅತ್ಯಂತ ಮಹತ್ವದ ಹೋರಾಟವಾಗಿದೆ ಎಂದು ಸಾಹಿತಿ ಹೂಲಿ ಶೇಖರ್ ಅವರು “ಹಲಗಲಿ ಬೇಡರ ದಂಗೆ” ನಾಟಕದ ಮೂಲಕ ನಮಗೆ ಮನಗಾಣಿಸಿದ್ದಾರೆ.

ದೊಡ್ಡೇರಿ ಬೇಡರ ದಂಗೆ ಹಾಗೂ ಹಲಗಲಿಯ ದಂಗೆಗಿಂತಲೂ ಪೂರ್ವದಲ್ಲಿ 1799 ರಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಮೈಸೂರು ಹುಲಿಟಿಪ್ಪು ಸುಲ್ತಾನ್ ವೀರಮರಣ ಅಪ್ಪುವುದರೊಂದಿಗೆ ಇಡೀ ಅಖಂಡ ಭಾರತ ಬ್ರಿಟಿಷರ ಕೈವಶವಾಯಿತು. ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡ ನೆಲದಲ್ಲಿಯೇ ಮಡಿದ ತಾಯ್ನೆಲದ ಮಹಾಪ್ರೇಮಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಸಂಘಟಿಸಿದ ಹೋರಾಟಗಳು ಸ್ವಾತಂತ್ರ್ಯ ಹೋರಾಟವಲ್ಲದೆ ಮತ್ತೇನು? ಚರಿತ್ರಕಾರ ಸಾಕಿ ಅವರು Making History ಕೃತಿಯಲ್ಲಿ ಹೇಳಿರುವ ಪ್ರಕಾರ Tippu is a real cultural folk hero and revolutionary even as a ruler. ಜನಪದರು ಟಿಪ್ಪುವನ್ನು ಕುರಿತು ಹೊಗಳಿ ಲಾವಣಿಗಳನ್ನು ಕಟ್ಟಿ ಹಾಡಿದ್ದಾರೆ. ಬ್ರಿಟಿಷರ ವಿರುದ್ಧ ಟಿಪ್ಪೂ ಸುಲ್ತಾನ್ ಸಂಘಟಿಸಿದ ಹೋರಾಟ ಪ್ರಥಮ ಸ್ವಾತಂತ್ರ್ಯ ಹೋರಾಟವಾಗಿ ರಾಷ್ಟ್ರೀಯವಾದಿಗಳ ಕಣ್ಣುಗಳಿಗೆ ಕಾಣಿಸುವುದಿಲ್ಲ. ಯಾಕೆಂದರೆ ಅವನೊಬ್ಬ ಮುಸ್ಲಿಂ.

1829 ರಿಂದ 1831 ರವರೆಗೆ ಕರ್ನಾಟಕದ ಮಲೆನಾಡಿನಲ್ಲಿ ಬ್ರಿಟಿಷ್‌ ಕಂಪನಿ ಆಡಳಿತದ ವಿರುದ್ಧ ಹೋರಾಟಗಳು ನಡೆದಿವೆ. ಪಶ್ಚಿಮ ಘಟ್ಟಗಳ ಕಣಿವೆಗಳ ಫಲವತ್ತಾದ ಕುಮ್ರಿ ಬೇಸಾಯದ ನೆಲ ಊಳಿಗಮಾನ್ಯಶಾಹಿ ಅಥವಾ ಬ್ರಿಟಿಷರ ಪಾಲಾಗಬಾರದೆಂದು ಅಲ್ಲಿನ ರೈತಾಪಿಗಳು ಹೋರಾಟ ನಡೆಸಿದ್ದಾರೆ.

ಬುಡಕಟ್ಟು ಜನಾಂಗದವರು ನಡೆಸಿದ ವಸಾಹತು ವಿರೋಧಿ ಹೋರಾಟಗಳು ರಾಷ್ಟ್ರೀಯವಾದಿಗಳ ದೃಷ್ಟಿಯಲ್ಲಿ ಸ್ವಾತಂತ್ರ್ಯ ಹೋರಾಟಗಳಲ್ಲ. ಪ್ರಖ್ಯಾತ ಕಾದಂಬರಿಕಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಹಾಶ್ವೇತಾದೇವಿ ಅವರು, ‘ಏತೋ ಮುಂಡ ಯುದ್ಧವನ್ನು ಗೆದ್ದಎಂಬ ಕಿರು ಕಾದಂಬರಿ ಮೂಲಕ ಮುಂಡಾಲ ಆದಿವಾಸಿ ಸಮುದಾಯದ ಹುಡುಗನ ಬದುಕಿನ ಬಗ್ಗೆ ಚಿತ್ರಿಸುತ್ತಲೇ ತಮ್ಮ ಇತರ ಸಂಶೋಧನಾ ಕೃತಿಗಳಲ್ಲಿ ಮುಂಡಾಲ ಸಮುದಾಯದ ಬಿರ್ಸಾ ಮುಂಡಾ ಎಂಬ ವೀರನು ಬ್ರಿಟಿಷರ ವಿರುದ್ಧ ಆದಿವಾಸಿಗಳ ವೀರೋಚಿತ ದಂಗೆಯನ್ನು ಸಂಘಟಿಸಿರುವುದನ್ನು ವಿವರಿಸಿದ್ದಾರೆ.

1830-31 ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ನಡೆದ ನಗರ ಡಿವಿಷನ್‌ ರೈತರ ದಂಗೆಯು, ಬ್ರಿಟಿಷರ ನೇಮಕಾತಿತನದಲ್ಲಿ ರಾಜ್ಯವಾಳುತ್ತಿದ್ದ ಮೂರನೇ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದ ಶಿರ್ತಿ ಕಂದಾಯ ವ್ಯವಸ್ಥೆಯನ್ನು ವಿರೋಧಿಸಿ ನಡೆಸಿದ ದಂಗೆಯಾಗಿತ್ತು. ಇದು ಏಕಕಾಲದಲ್ಲಿ ಸ್ಥಳೀಯ ಆಂತರಿಕ ವಸಾಹತುಶಾಹಿ ಹಾಗೂ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧದ ದಂಗೆಯಾಗಿತ್ತು. ವಸಾಹತುಶಾಹಿ ದುರಾಕ್ರಮಣಗಳ ವಿರುದ್ಧ ಬುಡಕಟ್ಟು ಜನಾಂಗಗಳು ಮತ್ತಿತರ ತಳಸಮುದಾಯಗಳು ನಡೆಸಿದ ಹೋರಾಟಗಳು ಭಾರತದ ಸ್ವಾತಂತ್ರ್ಯ ಚಳವಳಿಯ ಪುಟಗಳಲ್ಲಿ ದಾಖಲಾಗಲೇ ಇಲ್ಲ.

ರಾಷ್ಟ್ರೀಯವಾದಿ ಇತಿಹಾಸಕಾರರು ಮೇಲ್ಜಾತಿ ಮತ್ತು ಆಳುವ ವರ್ಗಗಳ ಚರಿತ್ರೆಯನ್ನು ದಾಖಲಿಸಿದರೇ ಹೊರತು ತಳ ಸಮುದಾಯಗಳ ಹೋರಾಟದ ಪುಟಗಳನ್ನು ಬರೆಯಲೇ ಇಲ್ಲ. ಯಾಕೆಂದರೆ ಅಂಬೇಡ್ಕರ್ ಹೇಳುವಂತೆ ತಳ ಸಮುದಾಯಗಳು ಏಕಕಾಲದಲ್ಲಿ ಹೊರಗಿನ ಬ್ರಿಟಿಷರ ವಸಾಹತುಶಾಹಿ ಹಾಗೂ ನಮ್ಮದೇ ದೇಶದ ಆಂತರಿಕ ವಸಾಹತುಶಾಹಿ‘ (internal colonialism) ವಿರುದ್ಧ ತಿರುಗಿಬಿದ್ದವರು.

ಅಂಬೇಡ್ಕರ್ ಅವರು ಬ್ರಿಟಿಷರಿಂದ ದೇಶವು ರಾಜಕೀಯ ಸ್ವಾತಂತ್ರ್ಯ ಪಡೆಯುವುದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಬಿಡುಗಡೆಯಾಗಬೇಕೆಂದು ಸಾಮಾಜಿಕ ನ್ಯಾಯಕ್ಕಾಗಿ ಹೆಚ್ಚು ಹೋರಾಟ ನಡೆಸಿದರು. 1818 ರಲ್ಲಿ ಕೋಮುವಾದಿ ಮರಾಠ ಪೇಶ್ವೆಗಳ ವಿರುದ್ಧ ಹೋರಾಟ ನಡೆಸಿ ಬ್ರಿಟಿಷರಿಗೆ ಕೊರೆಗಾವ್ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಮಹಾರ್ ವೀರಯೋಧರ ಸ್ತಂಭಕ್ಕೆ ಪ್ರತಿ ವರ್ಷದ ಜನವರಿ ಒಂದನೇ ದಿನದಂದು ಗೌರವ ವಂದನೆ ಸಲ್ಲಿಸುತ್ತಿದ್ದರು. ಅಸ್ಪೃಶ್ಯ ಮಹಾರ್ ವೀರಯೋಧರು ಸಾಮಾಜಿಕ ಸಮಾನತೆಯ ಸ್ಥಾಪನೆಗಾಗಿ ಹೋರಾಡಿ ಜಯ ತಂದುಕೊಟ್ಟರು.

ಅವರು ಬ್ರಿಟಿಷರಿಗೆ ಗೆಲುವು ತಂದುಕೊಟ್ಟವರಾದರೂ ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಅದಾಗಿತ್ತು. ದೇಶವು ಆಡಳಿತ ಯಂತ್ರಾಂಗದ ರಾಜಕೀಯ ದಾಸ್ಯದಿಂದ ಬಿಡಗಡೆ ಹೊಂದುವುದಷ್ಟೇ ಸ್ವಾತಂತ್ರ್ಯವಲ್ಲ. ರಾಜಕೀಯ ವಿಮೋಚನೆಗಿಂತಲೂ ಸಾಮಾಜಿಕ ಸಮಾನತೆಯ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯವೆಂದು ಅಂಬೇಡ್ಕರ್ ಗ್ರಹಿಸಿದ್ದರು. ಹೀಗಾಗಿ ಸ್ವಾತಂತ್ರ್ಯ ಎಂಬ ಪರಿಕಲ್ಪನೆಯನ್ನು ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ನಾವು ಮರು ವ್ಯಾಖ್ಯಾನಿಸಿಕೊಳ್ಳಬೇಕಿದೆ. ಭಾರತದ ಅಸಲಿ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾದದ್ದು ದುಡಿಯುವ ತಳ ಸಮುದಾಯಗಳಿಂದಲೇ ಹೊರತು ಮೇಲ್ಜಾತಿಯ ಆಳುವ ವರ್ಗಗಳಿಂದಲ್ಲ ಎಂಬುದನ್ನು ನಾವು ಮನಗಾಣಬೇಕಿದೆ.
ಲೇಖನ: ಡಾ.ವಡ್ಡಗೆರೆ ನಾಗರಾಜಯ್ಯ 8722724174

 

 

Share This Article
error: Content is protected !!
";