ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರೆಂಟಿ! ಎನ್ನುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ವಿಜಯಪುರ ಪುರಸಭೆಯ ದ್ವೀತಿಯ ದರ್ಜೆಯ ನೌಕರ ಪವನ್ ಜೋಶಿ ಸಾವಿಗೆ ಪುರಸಭೆ ಸದಸ್ಯ ಹನೀಫುಲ್ಲಾ, ಮಾಜಿ ಸದಸ್ಯ ಜೆ.ಎನ್. ಶ್ರೀನಿವಾಸ್ ಹಾಗೂ ಮುಖಂಡ ಮುನಿರಾಜು ಅವರ ಕಿರುಕುಳವೇ ಕಾರಣ ಎಂದು ಮೃತ ಪವನ್ ಜೋಶಿ ಅವರ ಪತ್ನಿ ಅನನ್ಯ ಆರೋಪಿಸಿದ್ದು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಕಿರುಕುಳಕ್ಕೆ ಬಲಿಯಾದ ಸಿಬ್ಬಂದಿ, ಅಧಿಕಾರಿಗಳ ಸಂಖ್ಯೆ ಏರುತ್ತಲೇ ಇದೆ.
ಜಾತಿಗಣತಿ ಸಮೀಕ್ಷೆಯ ಒತ್ತಡ ತಾಳಲಾರದೆ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಕಲಬುರಗಿಯಲ್ಲಿ ವೇತನ ಸಿಗದೆ ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಕಮಿಷನ್ ದಾಹಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಎಸ್ ಡಿಎ ಪವನ್ ಜೋಶಿ ಸಾವು ಪ್ರಕರಣದಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಬೇಕು, ಎಸ್‍ಐಟಿ ತನಿಖೆ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರನ್ನು ಅಶೋಕ್ ಒತ್ತಾಯಿಸಿದ್ದಾರೆ.

