ಚಂದ್ರವಳ್ಳಿ ನ್ಯೂಸ್, ಮಂಡ್ಯ/ಬೆಂಗಳೂರು:
ಕಾರು ಮತ್ತು ಸಾರಿಗೆ ಸಂಸ್ಥೆಯ ಐರಾವತ ಬಸ್ ಮಧ್ಯ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯ ಮಂಡ್ಯ ತಾಲೂಕಿವ ತೂಬಿನಕೆರೆ ಎಕ್ಸಿಟ್ ಬಳಿ ಸಂಭವಿಸಿದೆ.
ಕಾರು ಮೈಸೂರು ಕಡೆಗೆ ಹೊರಟಿತ್ತು. ಈ ವೇಳೆ ಎಕ್ಸ್ಪ್ರೆಸ್‌ವೇನಿಂದ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲ ಉಂಟಾಗಿದ್ದು, ಮತ್ತೆ ಕಾರನ್ನು ಎಕ್ಸ್ಪ್ರೆಸ್ ವೇಗೆ ತಿರುಗಿಸಿದ್ದಾನೆ. ಇದೇ ವೇಳೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಬಂದಿದ್ದು ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಬೆಂಗಳೂರಿನ ಜೆಪಿ ನಗರದವರೆಂದು ಗುರುತಿಸಲಾಗಿದೆ. ಸತ್ಯಾನಂದ ರಾಜೇ ಅರಸ್(52), ಪತ್ನಿ ನಿಶ್ಚಿತಾ, ಚಂದ್ರು ಮತ್ತು ಸುವೇದಿನಿ ರಾಣಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.