ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಭೀಕರ ಅಪಘಾತದಲ್ಲಿ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿ ಬಳಿ ಜರುಗಿದೆ. ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿ ಗ್ರಾಮದ ಪಲ್ಲವಿ (26), ಹೊಳೆ ಸಿರಿಗೆರೆ ಗ್ರಾಮದ ಸುಮಾ(26) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಒಂದೇ ಬೈಕ್ನಲ್ಲಿ ಪಲ್ಲವಿ, ಸುಮಾ ಹಾಗೂ ಸಚಿನ್ ಬರುವಾಗ ಕಾರು ಡಿಕ್ಕಿ ಹೊಡೆದಿದೆ.ಮೂವರು ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪಲ್ಲವಿ ಮತ್ತು ಸುಮಾ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಚಿನ್ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.