ಅಧಿವೇಶನದಲ್ಲಿ ಸದ್ದು ಮಾಡಲಿರುವ 29 ಬಾಣಂತಿಯರು ಮತ್ತು 322 ಶಿಶುಗಳ ಸಾವುಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬೆಳಗಾವಿಯ ವಿವಿಧ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ 29 ಬಾಣಂತಿಯರು ಮತ್ತು 322 ಶಿಶುಗಳ ಮೃತಪಟ್ಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟ ವಿಷಯ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು ಬೆಳಗಾವಿ ಜಿಲ್ಲೆ ಒಂದರಲ್ಲೇ ಕಳೆದ 2024ರ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ ಬೆಳಗಾವಿ ಜಿಲ್ಲೆಯಲ್ಲಿ 29 ಬಾಣಂತಿಯರ ಸಾವುಗಳಾಗಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣದಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಪ್ರಭಾರಿ ಡಿಎಚ್ಒ ಶರಣಪ್ಪ ಗಡೆದ ಮಾಹಿತಿ ನೀಡಿದರು.

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ ಬರೋಬ್ಬರಿ 322 ಶಿಶುಗಳ ಸಾವಾಗಿದ್ದು, ಜಿಲ್ಲಾಸ್ಪತ್ರೆಯೊಂದರಲ್ಲೇ 172 ಶಿಶುಗಳು ಮೃತಪಟ್ಟಿವೆ. ಪ್ರತಿ ತಿಂಗಳು 45 ರಿಂದ 52 ಸರಾಸರಿಯಲ್ಲಿ ಶಿಶುಗಳು ಮರಣ ಹೊಂದಿದ್ದು ಆಘಾತಕಾರಿ ವಿಷಯವಾಗಿದೆ.

ಶಿಶುಗಳಲ್ಲಿ ತೂಕ ಕಡಿಮೆ, ಸರಿಯಾಗಿ ಬೆಳವಣಿಗೆ ಆಗದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ,‌ನ್ಯುಮೋನಿಯಾ, ಉಸಿರುಗಟ್ಟುವಿಕೆ ಮತ್ತು ಅಪೌಷ್ಟಿಕತೆಯಿಂದ ಶಿಶುಗಳು ಮೃತಪಟ್ಟಿವೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ವಿಠ್ಠಲ್ ಶಿಂಧೆ ಮತ್ತು ಡಿಎಚ್ಒ ಶರಣಪ್ಪ ಗಡೆದ ತಿಳಿಸಿದರು.

ಇತ್ತೀಚಿಗೆ ಬೆಳಗಾವಿ ಜಿಲ್ಲಾಸ್ಪತ್ರೆ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಬೆಳಗಾವಿ ಲೋಕಾಯುಕ್ತ ಎಸ್​ಪಿ ಹನುಮಂತರಾಯ ನೇತೃತ್ವದಲ್ಲಿ 8 ಅಧಿಕಾರಿಗಳಿಂದ ಉಗ್ರಾಣದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪಿಬಿಪಿ ಸಂಸ್ಥೆ‌‌ಸರಬರಾಜು ಮಾಡಿರುವ ಐವಿ ಗ್ಲೂಕೋಸ್ ಬಾಕ್ಸ್​ಗಳು ಪತ್ತೆಯಾಗಿದ್ದವು.

ಬೆಳಗಾವಿ ಜಿಲ್ಲೆಯಾದ್ಯಂತ ಏಪ್ರಿಲ್ ತಿಂಗಳಲ್ಲೇ ಆರ್​ಎಲ್​ಎಸ್​​ ಐವಿ ಗ್ಲೂಕೋಸ್ ಪೂರೈಕೆಯಾಗಿದ್ದು, ಎಲ್ಲೆಲ್ಲಿ ಪೂರೈಕೆಯಾಗಿದೆ ಎಂಬ ಬಗ್ಗೆ ಉಗ್ರಾಣ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ದೊರೆತಿದ್ದು ಕಳಪೆ ಐವಿ ಗ್ಲೂಕೋಸ್ ಪೂರೈಕೆ ಸಾವುಗಳಿಗೆ ಕಾರಣ ಎನ್ನಲಾಗಿದೆ.

 

 

- Advertisement -  - Advertisement - 
Share This Article
error: Content is protected !!
";