ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿಗಳ ಬದಲಾವಣೆ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಸಿಎಲ್ಪಿ ಸಭೆ ಕರೆಯುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸದಾಶಿವನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂದರ್ಭ ಬಂದಾಗ ಹೈಕಮಾಂಡ್ ಸಿಎಲ್ಪಿ ಸಭೆ ಕರೆಯುತ್ತಾರೆ. ಆಗ ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ವೀಕ್ಷಕರು ಹೈಕಮಾಂಡ್ಗೆ ವರದಿ ಕೊಡುತ್ತಾರೆ. ಆ ನಂತರ ಯಾರು?, ಏನು? ಎಂಬ ಘೋಷಣೆ ಆಗುತ್ತದೆ. ಇದು ನಮ್ಮ ಪಕ್ಷದಲ್ಲಿನ ಪದ್ಧತಿ. ನಾನು, ಸತೀಶ್, ಮಹದೇವಪ್ಪ ಕಾಫಿ ಕುಡಿಯುಲು ಸೇರಿದ್ವಿ. ಇದರ ಹಿಂದೆ ಬೇರೆ ಏನೂ ಇಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಕುರಿತು ಯತೀಂದ್ರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಡಾ.ಜಿ ಪರಮೇಶ್ವರ, ಸೈದ್ಧಾಂತಿಕವಾಗಿ ಯತೀಂದ್ರ ಅವರು ಸತೀಶ್ ಹೆಸರು ಹೇಳಿದ್ದಾರೆ, ತಪ್ಪೇನಿದೆ?. ಹಿಂದೆ ಅವರು ಅಹಿಂದ ಚಳುವಳಿಯಲ್ಲಿದ್ದರು. ಅವರಿಗೆ ಬದ್ಧತೆ ಇದೆ ಅಂತ ಹೇಳಿರಬಹುದು. ಸಿಎಂ ಹುದ್ದೆ ಇಟ್ಕೊಂಡು ಆ ಹೇಳಿಕೆ ನೀಡಿಲ್ಲ ಎಂದು ಗೃಹ ಸಚಿವರು ಯತೀಂದ್ರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನಗರದಲ್ಲಿ ನಡೆದ ಮಹಿಳೆಯ ಗ್ಯಾಂಗ್ ರೇಪ್ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ತಕ್ಷಣ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರ ಹುಡುಕಾಟ ನಡೆಯುತ್ತಿದೆ. ಕಾನೂನು ಪ್ರಕಾರ ಕ್ರಮ ಆಗಲಿದೆ ಕೈಗೊಳ್ಳಲಾಗುತ್ತದೆ ಎಂದರು.
ಕಬಡ್ಡಿ ಪಂದ್ಯದ ಬೆಟ್ಟಿಂಗ್ ವಿಚಾರ ಕುರಿತು ಮಾತನಾಡಿದ ಡಾ.ಪರಮೇಶ್ವರ, ಜೂನಿಯರ್ ಕಾಲೇಜು ಹಂತದ ಪಂದ್ಯ ನಡೆದಿತ್ತು, ವಿಜೇತರಿಗೆ ಬಹುಮಾನ ಕೊಡುವುದಿತ್ತು. ನಾನು ಹೋಗಿದ್ದೆ. ಅಲ್ಲಿ ಡಿಸಿ, ಎಸ್‌ಪಿ, ಸಿಇಒ ಎಲ್ಲರೂ ಇದ್ದರು. ಯಾರು ಗೆಲ್ಲುತ್ತಾರೆ ಅಂತ ಸಹಜವಾಗಿ ಎಲ್ಲರೂ ಮಾತಾನಾಡುತ್ತಿದ್ದರು.
ಸೋಲು, ಗೆಲುವಿನ ಕುರಿತು ತಮಾಷೆಗೆ ಚರ್ಚೆ ಆಗುತ್ತಿತ್ತು. ನನಗೆ ಅಷ್ಟೂ ಬುದ್ಧಿ ಇಲ್ವಾ?. ಗೃಹ ಸಚಿವನಾಗಿ ಬೆಟ್ಟಿಂಗ್ ಕಟ್ಟುವ ಮಟ್ಟಕ್ಕೆ ಹೋಗುತ್ತೀನಾ?. ಅಷ್ಟೂ ಕನಿಷ್ಠ ಜ್ಞಾನ ಇಲ್ವಾ?. ಸುಮ್ಮನೆ ಅನಾವಶ್ಯಕ ವಿವಾದ ಮಾಡಲಾಗುತ್ತಿದೆ. ಅದು ಬೆಟ್ಟಿಂಗ್ ಅಲ್ಲ. ನಾನೂ ಒಬ್ಬ ಸ್ಪೋರ್ಟ್ಸ್ ಮನ್ ಎಂದು ಸಚಿವರು ತಿಳಿಸಿದರು.
ಚಿತ್ತಾಪುರ ಆರ್‌ಎಸ್‌ಎಸ್ ಪಥ ಸಂಚಲನ ಕುರಿತು ಮಾತನಾಡಿದ ಸಚಿವ ಪರಮೇಶ್ವರ, ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆ ಅನುಮತಿ ಕುರಿತು ಆದೇಶವಾಗಿದ್ದು ಅನುಮತಿ ಪಡೆಯಬೇಕು. ಸಂಘದವರು ಅನುಮತಿ ಕೇಳಿದ್ದಾರೆ, ಬೇರೆ ಸಂಘಟನೆಗಳೂ ಕೇಳಿದ್ದಾರೆ. ಸ್ಥಳೀಯ ಆಡಳಿತ ತೀರ್ಮಾನ ಮಾಡಲಿದೆ.
ನಮ್ಮ ಸುತ್ತೋಲೆಯಲ್ಲಿ ಆರ್‌ಎಸ್‌ಎಸ್‌ಪದ ಬಂದಿಲ್ಲ. ಆರ್‌ಎಸ್‌ಎಸ್‌ಅನ್ನು ಇಟ್ಕೊಂಡು ಆದೇಶ ಮಾಡಿಲ್ಲ. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಸಂಘರ್ಷ ಆಗಬಾರದು ಅಂತ ನಿಯಮ ಹಾಕಿದ್ದೇವೆ. ಶಾಲಾ, ಕಾಲೇಜಿಗೆ ತೊಂದರೆ ಆಗಬಾರದು ಎಂದು ಗೃಹ ಸಚಿವರು ತಿಳಿಸಿದರು.

