ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈದುಂಬಿ ಹರಿಯುತ್ತಿರುವ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು.
ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್ ಹೆಚ್ಚಿಸಲು ನಮ್ಮ ಸರ್ಕಾರ ಸಂಕಲ್ಪವನ್ನು ಮಾಡಿದೆ. ಮುಖ್ಯಮಂತ್ರಿ ಹಾಗೂ ಸಣ್ಣ ನೀರಾವರಿ ಸಚಿವರೊಂದಿಗೆ ಕೇಂದ್ರದ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿ, ಈ ಬಗ್ಗೆ ನೋಟಿಫಿಕೇಶನ್ ಹೊರಡಿಸುವಂತೆ ಒತ್ತಾಯಿಸಿದ್ದೇವೆ ಎಂದು ಡಿಸಿಎಂ ಅವರು ತಿಳಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಐದು ಬಾರಿ ಕೇಂದ್ರ ಸಚಿವರು ಸೇರಿದಂತೆ ಪ್ರಧಾನಮಂತ್ರಿ ಅವರನ್ನು ಸಹ ಭೇಟಿ ಮಾಡಿದ್ದೇವೆ. ಎರಡು ಬಾರಿ ನಮ್ಮ ಕೇಂದ್ರದ ಮಂತ್ರಿಗಳು ಸಭೆಯನ್ನು ನಿಗದಿ ಮಾಡಿದ್ದರು. ಆದರೆ, ಒಂದು ಬಾರಿ ಆಂಧ್ರಪ್ರದೇಶದವರು ಮತ್ತೊಂದು ಬಾರಿ ಮಹಾರಾಷ್ಟ್ರದವರು ಸಭೆಯನ್ನು ಮುಂದಕ್ಕೆ ಹಾಕಿಸಿದ ಬಗ್ಗೆ ನನಗೆ ಮಾಹಿತಿ ಬಂದಿದೆ.
ಈಗಾಗಲೇ 100ಕ್ಕೂ ಹೆಚ್ಚು ಟಿಎಂಸಿ ನೀರು ಸಮುದ್ರಕ್ಕೆ ಸೇರಿದೆ. ಕೆಲವು ಸಂದರ್ಭದಲ್ಲಿ 400 ಟಿಎಂಸಿವರೆಗೂ ನೀರು ಸಮುದ್ರಕ್ಕೆ ಹೋಗಿದೆ. ಸಮುದ್ರಕ್ಕೆ ಸೇರುತ್ತಿರುವ ನೀರನ್ನು ನಮ್ಮ ರೈತರ ಅನುಕೂಲಕ್ಕೆ ಬಳಕೆಯಾಗಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ಕೃಷ್ಣಾ ಮೇಲ್ದಂಡೆ ಹಂತ-3 ಯೋಜನೆಗೆ ಒಳಪಟ್ಟ ಭೂ ಸಂತ್ರಸ್ತ ರೈತರ ಹಾಗೂ ಕಾಲುವೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸಭೆಗಳನ್ನು ನಡೆಸಿ, ಚರ್ಚಿಸಿದ್ದೇವೆ.
ಭೂ ಸಂತ್ರಸ್ತ ರೈತರು, ಸರ್ವಪಕ್ಷದ ಜನಪ್ರತಿನಿಧಿಗಳನ್ನು ವಿಧಾನಸೌಧಕ್ಕೆ ಕರೆದು ಅವರೊಂದಿಗೆ ಸಭೆ ನಡೆಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಹೆಚ್ಚುವರಿ ಭೂ ಪರಿಹಾರ ಕೋರಿ ಸುಮಾರು 20 ಸಾವಿರ ಪ್ರಕರಣಗಳನ್ನು ದಾಖಲಿಸಿ ರೈತರು ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ.
ರೈತರನ್ನು ದಾರಿ ತಪ್ಪಿಸಲು ಕೆಲವು ವಕೀಲರು ಸಹ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಈ ಭಾಗದ ನಾಲ್ಕು ಜಿಲ್ಲೆಯ ರೈತರು ಸರ್ಕಾರಕ್ಕೆ ಸಹಕಾರವನ್ನು ನೀಡಬೇಕು. ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

