ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬುದ್ಧ ಬಹುತ್ವ ಭಾರತಕ್ಕೆ ಜ್ಞಾನವನ್ನು ಬೋಧಿಸಿದರು. ಚಾರ್ತುವರ್ಣಗಳಿಂದ ಬೇಸತ್ತ ಜನರಿಗೆ ಒಳ್ಳೆಯ ಜೀವನ ಕಟ್ಟಿಕೊಳ್ಳುವುದಕ್ಕೆ ಬುದ್ಧ ಸಂದೇಹ ಸಹಕಾರಿಯಾಗಿವೆ ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತರು ಅನುಭವಿಸುತ್ತಿರುವ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯನ್ನು ತೊಲಗಿಸಿ ಸ್ವಾಭಿಮಾನ ಮತ್ತು ಘನತೆಯ ಬದುಕನ್ನು ನಡೆಸುವಂತಾಗಲು ಶೋಷಿತರು ಪ್ರಜ್ಞಾಪೂರ್ವಕವಾಗಿ
ಬುದ್ದನ ಹಾದಿಯಲ್ಲಿ ಸಾಗುತ್ತ ಧಮ್ಮಪಥದಲ್ಲಿ ನಡೆದಾಗಲೇ ಆ ಸಮುದಾಯಗಳು ವಿಮೋಚನೆ ಕಡೆ ದೃಢತೆಯ ಹೆಜ್ಜೆ ಹಾಕಲು ಸಾಧ್ಯ ಎಂದು ಡಯಟ್ ಉಪನ್ಯಾಸಕರಾದ ರಾಮಚಂದ್ರಪ್ಪ ಅವರು ಮಂಗಳವಾರ ಅಂಬೇಡ್ಕರ್ ವಿಚಾರ ವೇದಿಕೆ ಚಿತ್ರದುರ್ಗ ಮತ್ತು ಜಂಬೂದ್ವೀಪ ಕರ್ನಾಟಕ ಇವರ ಸಹಯೋಗದಲ್ಲಿ ಪುಲೆ ಅಧ್ಯಯನ ಕೇಂದ್ರದಲ್ಲಿ ನಡೆದ ಧಮ್ಮದೀಕ್ಷಾ ದಿನದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮಕ್ಕೆ ಮೊದಲು ಬುದ್ದರ ಪ್ರತಿಮೆಗೆ ಪುಷ್ಪಾರ್ಚನೆಗೈದು ಸಾಮೂಹಿಕವಾಗಿ ತ್ರಿಸರಣವನ್ನು ಪಠಿಸಲಾಯಿತು.
ಬುದ್ದಧಮ್ಮವನ್ನು ಅಂಬೇಡ್ಕರ್ ಅವರು ನವಬೌದ್ಧ ಧಮ್ಮವೆಂದೇ ಕರೆದಿದ್ದು ಈ ಧಮ್ಮದಲ್ಲಿ ಸಮತೆ ,ಕರುಣೆ ,ಮೈತ್ರಿ ಅಂತರ್ಗತವಾಗಿದೆ ಈ ಧಮ್ಮವು ವೈಚಾರಿಕ ನೆಲೆಯದ್ದಾಗಿದ್ದು ಎಲ್ಲಾ ಬಗೆಯ ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಮುಕ್ತವಾಗಿದ್ದು ‘ಬುದ್ದ ಮತ್ತು ಆತನ ಧಮ್ಮ‘ ಗ್ರಂಥವು ಬುದ್ದ ಧಮ್ಮವನ್ನು ತಿಳಿಯಲು ಮಹತ್ವದ್ದಾಗಿದೆ ಎಂದು ಕವಿ ಚಿಂತಕ ಎಚ್.ಆನಂದಕುಮಾರ್ ರವರು ಹೇಳಿದರು.
ವೈಜ್ಞಾನಿಕ ಅರಿವಿರುವ ಸಮಾಜ ಒಪ್ಪಿಕೊಳ್ಳಬಹುದಾದ ಒಂದೇ ಧಮ್ಮವೆಂದರೆ ಬೌದ್ದಧಮ್ಮವೆಂದೂ ಸಂವಿಧಾನ ಮತ್ತು ಬೌದ್ದಧಮ್ಮವೇ ಶೋಷಿತರ ಪಾಲಿನ ಆಶಾಕಿರಣವಾಗಿವೆ ಎಂದು ಪ್ರಾಧ್ಯಾಪಕರಾದ ಎಚ್.ಡಿ.ಪೋತೆ ಮಾತನಾಡಿದರು.
ಬುದ್ಧ ಧಮ್ಮ ಅನುಸರಣೆ ಸರಳವಾಗಿದ್ದು, ಬುದ್ಧ ಚಿಂತನೆಗಳಿಂದ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆಂದು ವೇದಾಂತ ಏಳಂಜಿ ತಿಳಿಸಿದರು. ನಂತರ ಜಿಲ್ಲೆಯಲ್ಲಿ ಬುದ್ಧನ ಉಪಾಸಕರು ಲಕ್ಷಾಂತರ ಜನರಿದ್ದಾರೆ ಅದಕ್ಕಾಗಿ ಬುದ್ಧ ವಿಹಾರದ ಸ್ಥಾಪನೆ ಬಗ್ಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕರಾದ ರಾಮಣ್ಣ ಬಾಲೇನಹಳ್ಳಿ ಹೇಳಿದರು.
ಜಂಬೂದ್ವೀಪದ ಕಾರ್ಯದರ್ಶಿ ಸಿದ್ದೇಶ್ ಬಾಬಾಸಾಹೇಬರ ೨೨ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಗೀತೆಗಳನ್ನು ಚಿಂತಕ ಕವಿ ಸೀಗೆಹಟ್ಟಿ ಶಿವಶಂಕರ್ ರವರು ಹೇಳಿದರು.
ಕಾರ್ಯಕ್ರಮವನ್ನ ಯಾದಲಗಟ್ಟೆ ಪ್ರಕಾಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಇಂಗ್ಲೀಷ ಪರಿವೀಕ್ಷಕರಾದ ರಾಘವೇಂದ್ರ, ರಾಮಶೇಖರ, ಹನುಮಂತಪ್ಪ, ಪಾತಪ್ಪ,ಸಿದ್ದಪ್ಪ ಟಿ, ಪ್ರದೀಪ್, ಕುಮಾರ್ ಹೆಚ್ ಮತ್ತಿತರು ಉಪಸ್ಥಿತರಿದ್ದರು.

