ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸಾರ್ವಜನಿಕರ ಸೇವೆಗಾಗಿ ಕರ್ತವ್ಯ ನಿರ್ವಹಿಸಬೇಕಿರುವ ಉಪ ವಿಭಾಗಾಧಿಕಾರಿಗಳ ಕಚೇರಿ ಹಾಗೂ ತಾಲೂಕು ದಂಡಾಧಿಕಾರಿಗಳ ಕಚೇರಿ ಬಲಾಢ್ಯರಿಗೆ ಹಣವಂತರಿಗೆ ಮಾತ್ರ ಸೇವೆ ಒದಗಿಸುವ ಮಟ್ಟಕ್ಕೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಕಿಸಾನ್ ಸಂಘಟನೆಯ ಪ್ರಮುಖರು ಪದಾಧಿಕಾರಿಗಳು ಹಾಗೂ ರೈತರು ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.
ತಾಲ್ಲೂಕು ಕಛೇರಿ, ಭೂದಾಖಲೆ ಸಹಾಯಕರ ನಿರ್ದೇಶಕರ ಕಛೇರಿಯ ಅಧಿಕಾರಿಗಳು ಮತ್ತು ನೌಕರರುಗಳು ಭೂಕಂದಾಯ ಕಾಯ್ದೆಯ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದರ ಫಲವಾಗಿ ರೈತರು ತಮ್ಮ ಭೂ ದಾಖಲೆ ಮಾಡಿಸಿಕೊಳ್ಳಲು ಕಚೇರಿಗಳಿಗೆ ನಿರಂತರ ಅಲೆಯುವಂತಾಗಿದೆ ಅಲ್ಲದೆ ಹಣಕೊಡಲು ಶಕ್ತಿ ಇಲ್ಲದ ರೈತರು ತಮ್ಮ ಭೂಮಿ ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ರವರ ಕಛೇರಿ ಮುಂಭಾಗದಲ್ಲಿ ಪ್ರಜಾ ಪ್ರಭುತ್ವ ಅಡಿಯಲ್ಲಿ ಶಾಂತಿಯುತ ಸತ್ಯಾಗ್ರಹಕ್ಕೆ ನಾವಿಂದು ಮುಂದಾಗಿದ್ದೇವೆ. ಅಧಿಕಾರಿಗಳು ಇನ್ನಾದರೂ ರೈತರ ಕಷ್ಟಗಳು ಅರಿಯಲಿ ರೈತರ ಜೀವನ ಉಳಿಸುವ ನಿಟ್ಟಿನಲ್ಲಿ ಸೂಕ್ತ ದಾಖಲೆ ಹೊಂದಿರುವ ಜಮೀನುಗಳ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಿ ಎಂದರು.
ಈ ಕುರಿತು ರಾಷ್ಟ್ರೀಯ ಕಿಸಾನ್ ಸಂಘಟನೆಯ ಉಪಾಧ್ಯಕ್ಷ ಭೀಮಯ್ಯ ಮಾತನಾಡಿ ಈ ಹಿಂದೆ ರೈತರ ಬಳಿ ಹಣಕ್ಕೆ ಅಮಿಷ ಇಡುತ್ತಿದ್ದಾರೆ ಎಂದು ದಾಖಲೆಗಳ ಸಮೇತ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರನ್ನು ಭೇಟಿಮಾಡಿ ತಿಳಿಸಿದ್ದೆವು ಈ ಹಿನ್ನಲೆಯಲ್ಲಿ ಕಂದಾಯ ಸಚಿವರು ತಾಲೂಕು ಕಚೇರಿಗೆ ಭೇಟಿ ನೀಡಿದ್ದರು. ತದನಂತರವಾದರೂ ಸ್ಥಳೀಯ ಅಧಿಕಾರಿಗಳ ಹಣದ ಆಸೆ ಕಡಿಮೆಯಾಗುತ್ತದೆ ಎಂದು ಭಾವಿಸಿದ್ದೆವು ಆದರೆ ಕಂದಾಯ ಸಚಿವರು ಬಂದು ಹೋದ ನಂತರ ಬ್ರಷ್ಟಾಚಾರ ಇನ್ನು ಹೆಚ್ಚಾಗಿದೆ,
ಅಧಿಕಾರಿಗಳು ರೈತರ ಸ್ವಂತ ಭೂಮಿಗಳನ್ನು ಅವರಿಗೆ ಮಂಜೂರು ಮಾಡಲು, ಖಾತೆ ಮಾಡಿಕೊಡಲು, ಸಣ್ಣಪುಟ್ಟ ವ್ಯಾಜ್ಯಗಳನ್ನು ಪರಿಹರಿಸಲು ಹಣದ ಬೇಡಿಕೆ ಇಡುತ್ತಿರುವುದು ಹೆಚ್ಚಾಗಿದೆ ಅಲ್ಲದೆ ಉಪ ವಿಭಾಗಾಧಿಕಾರಿಗಳ ಕಚೇರಿ ಹಾಗೂ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ತಮ್ಮ ಅಡಿಯಲ್ಲಿ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದು ಸರ್ಕಾರಿ ಕೆಲಸಗಳನ್ನು, ಕಡತದ ಆದೇಶಗಳನ್ನು ಖಾಸಗಿ ವ್ಯಕ್ತಿಗಳಿಂದ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸರ್ಕಾರಿ ಕಚೇರಿಗಳಲ್ಲಿ ಒಬ್ಬೊಬ್ಬ ಅಧಿಕಾರಿಗಳಿಗೆ ಸಹಾಯಕರಾಗಿ 15 ರಿಂದ 20 ಜನ ಖಾಸಗಿ ವ್ಯಕ್ತಿಗಳು ಕರ್ತವ್ಯ ನಿರ್ವಹಿಸುತ್ತಾರೆ . ಅಲ್ಲದೆ ಕಚೇರಿಗೆ ಬರುವ ಯಾವುದೇ ಸಮಸ್ಯೆಗಳನ್ನು ತಾವೇ ಮಧ್ಯವರ್ತಿವಹಿಸಿ ಹಣದ ಬೇಡಿಕೆ ಇಡುವ ಮೂಲಕ ರೈತರ ಪ್ರಾಣ ಹಿಂಡುತ್ತಿದ್ದಾರೆ ಎಂದರು.
ಹೋರಾಟಗಾರರ ಪ್ರಮುಖ ಬೇಡಿಕೆಗಳು:
ದೊಡ್ಡಬಳ್ಳಾಪುರ ಉಪವಿಭಾಗದ ಕಛೇರಿಯ ಓರ್ವ ಸಿಬ್ಬಂದಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಭೂಕಂದಾಯ ಕಾಯ್ದೆ 136/2ರಡಿ ಪ್ರಕರಣಗಳು ದಾಖಲಾಗಿ ಆದೇಶಗಳಗೆ ಕಾಯ್ದಿರಿಸಿ ಭೂಕಂದಾಯ ಕಾಯ್ದೆ ಹಾಗೂ ಸರ್ಕಾರದ 6 ಸುತ್ತೋಲೆ ಮತ್ತು ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಪ್ರಕರಣಗಳನ್ನು ತೀರ್ಮಾನ ಮಾಡುತ್ತಿದ್ದು ಇದರಿಂದ ಬಡ ರೈತರು ಮತ್ತು ಸರ್ಕಾರದ ಆಸ್ತಿಗಳನ್ನು ಸಹ ಪ್ರಕರಣದಲ್ಲಿ ಭೂಗಳ್ಳರ ಪರವಾಗಿ ಆದೇಶ ಮಾಡಿ ಸರ್ಕಾರಕ್ಕು ಸಹ ಬಹುಕೋಟಿ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ನ್ಯಾಯಾಲಯದ ಪ್ರಕರಣಗಳಲ್ಲಿ ವಾದಿ ಮತ್ತು ಪ್ರತಿವಾದಿಗಳಿಗೆ ವಾದ ಮಾಡಲು ಅವಕಾಶ ನೀಡದೆ ಮನಸ್ಸಿಗೆ ಬಂದಂತೆ ಪ್ರಭಾವಿಗಳ ಪರ ಆದೇಶ ಮಾಡುವುದರ ವಿರುದ್ದ ಕ್ರಮ ಜರುಗಿಸಬೇಕು.
ಆದೇಶಗಳನ್ನು ಕಾಯ್ದಿರಿಸುವುದು ಖಾಸಗಿ ವ್ಯಕ್ತಿಗಳು ಹಾಗೂ ದಳ್ಳಾಳಿಗಳು ಕಛೇರಿಯಲ್ಲಿ ಕಡತಗಳನ್ನು ಮತ್ತು ನ್ಯಾಯಾಲಯದ ಹಾಗೂ RRT ಪ್ರಕರಣಗಳನ್ನು ನಿರ್ವಹಿಸುವುದರ ವಿರುದ್ದ.
RA ಆಪೀಲು ಪ್ರಕರಣಗಳಲ್ಲಿ ಸ್ವತಃ ಕಂದಾಯ ನ್ಯಾಯಾಲಯಗಳಲ್ಲಿ ವಾದಿ ಪ್ರತಿವಾದಿಗಳ ಸಮಕ್ಷಮದಲ್ಲಿ ತೆರೆದ ನ್ಯಾಯಾಲಯದಲ್ಲಿ ಘೋಷಣೆ ಮಾಡದೆ ಕಾನೂನಿನಲ್ಲಿ ಅವಕಾಶವಿಲ್ಲದೆ ಇದ್ದರು ಸಹ ಆದೇಶ ಬರೆಯಲು ಕಡತಗಳನ್ನು ಕಾನೂನು ಅಭಿಪ್ರಾಯ ಕೇಳಿ ಆದೇಶ ಬರೆಯಲು ಕಡತ ನೀಡಿ ವಿಳಂಭದೋರಣೆ ತಾಳುತ್ತಿರುವ ವಿರುದ್ದ.
ದರಖಾಸ್ತು ಪೋಡಿ ಪ್ರಕರಣಗಳನ್ನು ಮತ್ತು ರೈತರುಗಳ ಜಮೀನುಗಳ ಪೋಡಿಯನ್ನು ಸಹ ದುರಸ್ತು ಮಾಡಲು ವಿಳಂಭದೋರಣೆ ತಾಳುತ್ತಿರುವ ವಿರುದ್ಧ. ಸರ್ಕಾರಿ ಕೆರೆ, ದಾರಿ, ಸ್ಮಶಾನ, ಗುಂಡುತೋಪು ಒತ್ತುವರಿ ತೆರವುಗೊಳಿಸದೆ ಇರುವ ಅಧಿಕಾರಿಗಳ ವಿರುದ್ಧ.
ಮಾನ್ಯ ಕಂದಾಯ ಸಚಿವರು ಕಛೇರಿಗಳಿಗೆ ಅನಿರೀಕ್ಷಿತ ಬೇಟಿ ನೀಡಿ ಅಧಿಕಾರಿಗಳ ಕಾರ್ಯವೈಕರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ತದನಂತರ ಭ್ರಷ್ಟಾಚಾರ ಅತಿಯಾಗಿರುವ ದೂರು ಕುರಿತು.
ಕಛೇರಿಗಳ ಮುಂಭಾಗದಲ್ಲಿ ಲಂಚದ ದರಪಟ್ಟಿ ಅಳವಡಿಕೆ ಬಗ್ಗೆ ನಾಮಪಲಕ ಅಳವಡಿಸುವ ಕುರಿತು.
ಮೇಲಧಿಕಾರಿಗಳು ಕಳೆದ 20 ವರ್ಷದಿಂದಲು ಸಹ ಕೆಳ ಅಂತದ ಕಛೇರಿಗಳ ಸಿಬ್ಬಂದಿ ಮತ್ತು ಅಧಿಕಾರಿಗಳ ಕಾರ್ಯವೈಕರಿ ಕುರಿತು ಅನಿರೀಕ್ಷಿತ ಬೇಟಿ ತಪಾಸಣೆ ಮಾಡದೆ ಇರುವುದರಿಂದ ಅತಿಯಾಗಿ ಭ್ರಷ್ಟಾಚಾರ ನಡೆಸುತ್ತಿರುವ ಕುರಿತು.
ಮೇಲಾಧಿಕಾರಿಗಳಿಂದ ಬಂದಂತಹ ಆದೇಶಗಳು ಉರ್ಜಿತವಾಯಿತೇ? ಎಂಬುದನ್ನು ಯಾವುದೇ ಅಧಿಕಾರಿಗಳು ಪರಿಶೀಲಿಸದಿರುವುದು. ಸುಮಾರು 3-4 ವರ್ಷಗಳಿಂದಲೂ ಬಾಕಿ ಇರುವ ಪ್ರಕರಣಗಳಿದ್ದು ಯಾವುದೇ ಕ್ರಮ ವಹಿಸದಿರುವುದರ ಬಗ್ಗೆ
ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸುವ ಕುರಿತು ಪ್ರಜಾ ಪ್ರಭುತ್ವದ ಅಡಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಕಿಸಾನ್ ಸಂಘಟನೆಯ ಉಪಾಧ್ಯಕ್ಷರಾದ ಭೀಮಯ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಿರೀಶ್, ಕಾರ್ಯಾಧ್ಯಕ್ಷರಾದ ಎಸ್ ಕೆ ಆನಂದ್, ಸಂಘಟನಾ ಕಾರ್ಯದರ್ಶಿ ಎ ಮಂಜುನಾಥ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಕೇಶವಮೂರ್ತಿ,ರಾಜ್ಯ ಘಟಕದ ಅಧ್ಯಕ್ಷರಾದ ಡಿಎಸ್ ವಿಜಯ್ ಕುಮಾರ್, ರಾಜ್ಯ ವಕ್ತಾರರಾದ ಪ್ರಶಾಂತ್, ಬೆಂಗಳೂರು ವಿಭಾಗೀಯ ಕಾರ್ಯದರ್ಶಿ ಗಣೇಶ್ ರಾವ್, ಬೆಂಗಳೂರು ವಿಭಾಗದ ಅಧ್ಯಕ್ಷರು ಮಂಜುನಾಥ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಚಂದ್ರರೆಡ್ಡಿ ಸೇರಿದಂತೆ ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಯಕಾರಿಣಿ ಸಭೆ ಸದಸ್ಯರು, ಸ್ಥಳೀಯ ರೈತರು ಹಾಜರಿದ್ದರು.

