ಹೂ ಬಿಡುವ ಕಾಲ   ಯುಗದ ಆದಿ ಕಾಲ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಹೂ ಬಿಡುವ ಕಾಲ
ಯುಗದ ಆದಿ ಕಾಲ*

ದಟ್ಟಡವೀಯ
ನಡುವೆ
ದುಂಡನೆ ಮಲ್ಲಿಗೆ
ಜಾಜಿ ಸಂಪಿಗೆ
ಹೊಂಗೆ ಬೇವಿನ
ಗಿಡಗಳ ಸಾಲು ಸಾಲು
ಎಲ್ಲೆಡೆ ಸೂಸಿಹುದು
ಕಂಪು ಕಂಪು

ನಲಿದಾಡಿ
ನರ್ತಿಸಿಸುವ ನವಿಲುಗಳು
ಝೆಂಕರಿಸಿ
ಮಕರಂದ ಹೀರುವ ದುಂಬಿಗಳು
ಸುವಾಸನೆ ಸ್ವಾದಿಸಲು
ಸುಯ್ಗುಡುವ ಸುಳಿಗಾಳಿ
ಭೂ ಒಡಲ ಗರ್ಭಕೆ ಮಳೆಯ ಸಿಂಚನ
ಟಿಸಿಲೊಡೆವ ಪರ್ವಕಾಲ

ಪಸರಿಸುವ
ಬೇರು ಬೀಜಕೆ
ಪಕ್ಷಿಗಳ ಕಲರವ
ತುತ್ತು ಕೊಡುವ ತಾಯಿಗೆ
ನಲಿವ ಮರಿಗಳು
ರೆಕ್ಕೆ ಬಿಚ್ಚುವುದ
ನೋಡುವ ಸಂಭ್ರಮ

ವೃಕ್ಷ ರಾಜನ
ನಲಿವು, ವರುಷ
ಕಳೆದ ಹುಟ್ಟು ಹಬ್ಬದ
ನೆನಪು, ಹೊಸ ಚಿಗುರು
ಹಳೇ ಬೇರು ಕೂಡಿರಲು
ಹೊಸ ಸೊಗಡು
ಕಾದಿಹುದು ನೀಡಲು
ಹೊಸ ವರುಷದ
ಹೊನಲು

ಬೇವು ಬೆಲ್ಲವ
ಸವಿಯಲು
ಕಹಿ ಸಿಹಿಗಳ ನೆನಹು
ಮರೆತರೆ ಮರೆತೇನು
ಕಹಿಯ ನೆನಪುಗಳ
ನೆನೆದರೆ ನೆನೆದೇನು
ಸಿಹಿಯ ಸೊಬಗನು
ಬಾ ಯುಗಾದಿಯೇ
ಯುಗದ ಆದಿಯೇ
ಮನು ಕುಲದ
ಕಷ್ಟವ ನೀಗಿಸು ಬಾ

ರಚನೆ: ಗುರಾನಿ, ಜಿ.ಆರ್.ನಿಂಗೋಜಿ ರಾವ್
2000/35, ಮಾತೃಚಾಯ, ತರಳಬಾಳು ಬಡಾವಣೆ
11ನೇ ಕ್ರಾಸ್,ದಾವಣಗೆರೆ-577005
ಮೋ 9036389240

Share This Article
error: Content is protected !!
";