ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ಸ್ವಗೃಹದಲ್ಲಿ ಹಿರಿಯ ನಟಿ ಬಿ.ಸರೋಜಾ ದೇವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಭಾರತೀಯ ಚಿತ್ರರಂಗದ ಎಲ್ಲ ಭಾಷೆಯ ಸಿನಿಮಾಗಳಲ್ಲಿ ಸರೋಜಾದೇವಿ ಅವರು ನಟಿಸಿದ್ದಾರೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
160ಕ್ಕೂ ಹೆಚ್ಚಿನ ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸೋದು ಸಾಮಾನ್ಯ ಮಾತಲ್ಲ. ಅವರ ಜೊತೆ ನಾನು ನಟಿಸದೇ ಹೋದ್ರೂ ಸಾಕಷ್ಟು ಬಾರಿ ಮಾತನಾಡಿದ್ದೆ. ಯಾವಾಗ ಸಿಕ್ರೂ ಆತ್ಮೀಯವಾಗಿ ಮಾತನಾಡುತ್ತಿದ್ದರು. ನನಗೆ ಅವಾರ್ಡ್ ಸಿಕ್ಕಾಗ ಕರೆ ಮಾಡಿ ಮಾತನಾಡಿದ್ರು. ಗಂಭೀರವಾಗಿ ತುಂಬು ಜೀವನ ನಡೆಸಿದ್ದಾರೆ. ಅದ್ಬುತ ನಟಿ ಅವರು. ಅವರ ಅಗಲಿಕೆ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಕೋವಿಡ್ ವೇಳೆ ಧನಸಹಾಯ ನೀಡಿದ್ದ ಸರೋಜಾದೇವಿ:
ನಟಿ ಸರೋಜಾದೇವಿ ಅವರು ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿ ನಟರಿಗೆ ಸಾಕಷ್ಟು ಕೆಲಸ ಮಾಡಿದ್ರು. ಕೋವಿಡ್ ಸಮಯದಲ್ಲಿ ಅವರೇ ಕರೆ ಮಾಡಿ ಸಂಗೀತಕಾರರಿಗೆ ಏನಾದ್ರೂ ಸಹಾಯ ಬೇಕಾ ಅಂತಾ ಕೇಳಿದ್ರು. 2 ಲಕ್ಷ ರೂ. ಹಣ ಕೊಟ್ಟಿದ್ರು. ಆದ್ರೆ ಯಾರಿಗೂ ಹೇಳಿರಲಿಲ್ಲ ಎಂದು ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಅವರು ಯಾರಿಗೂ ಏನೂ ತೊಂದರೆ ಕೊಡದೇ ದೇವರ ಪಾದ ಸೇರಿದ್ದಾರೆ. ಹೀರೋಗಳು ಇವರೇ ಹಿರೋಯಿನ್ ಬೇಕು ಅಂತಾ ಕಾಯುತ್ತಿದ್ದರು. ಮನೆಗೆ ಹಣ ಕಳಿಸಿ ಸಹಾಯ ಮಾಡಿದ್ರು. ಮೃದು ಹೃದಯದವರು. ಸಾಕಷ್ಟು ಜನರಿಗೆ ಸಹಾಯ ಮಾಡಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಧು ಕೋಕಿಲ ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ:
ಸರೋಜಾದೇವಿ ಅವರು ಮನಸ್ಸಿಗೆ ಹಿಡಿಸುವಂತೆ ಅಭಿನಯಿಸುತ್ತಿದ್ದರು. ಹಲವಾರು ಭಾಷೆಯಲ್ಲಿ ಆತ್ಯಂತ ಯಶಸ್ವಿ ಕಂಡಿರುವ ಸೂಪರ್ ಸ್ಟಾರ್ ನಟಿ. ಅವರ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದವು ಎಂದು ಮಾಜಿ ಸಿಎಂ, ಸಂಸದ ಬಸವರಾಜು ಬೊಮ್ಮಾಯಿ ಹೇಳಿದರು.
ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದಲ್ಲಿ ನಿಜವಾದ ಚೆನ್ನಮ್ಮ ಹೀಗೆ ಇದ್ದರು ಅನ್ನೋ ಹಾಗೆ ನಟಿಸಿದ್ದರು. ಕಿತ್ತೂರು ಕಾರ್ಯಕ್ರಮಕ್ಕೆ ಬಂದಾಗ ಜನರೂ ಕೂಡಾ ಹಾಗೇ ಸ್ವಾಗತ ಮಾಡಿದ್ದರು. ಜಯಲಲಿತಾರ ಅತ್ಯಂತ ಆತ್ಮೀಯ ಸ್ನೇಹಿತರು. ಜಯಲಲಿತಾ ಕನ್ನಡ ಮಾತನಾಡಬೇಕು ಅಂದುಕೊಂಡಾಗ ಸರೋಜಾ ದೇವಿ ಕರೆಸಿಕೊಂಡು ಕನ್ನಡ ಮಾತನಾಡುತ್ತಿದ್ದೆ ಎಂದು ಹೇಳಿದ್ದರು. ಅವರ ಬದುಕಿನ ಜೀವಂತಿಕೆ ಕೊನೆಯುಸಿರುವವರೆಗೂ ಇರಲಿದೆ. ನಿಧನದಿಂದ ಎಲ್ಲರಿಗೂ ನೋವಾಗಿದೆ ಎಂದು ಬೊಮ್ಮಾಯಿ ಅವರು ಸಂತಾಪ ವ್ಯಕ್ತಪಡಿಸಿದರು.
ಅವರನ್ನು ನೋಡಿ ಶಿಸ್ತು, ಮಾರ್ಯಾದೆ ಏನು ಅನ್ನೋದನ್ನು ಕಲಿಯಬೇಕು:
ಸರೋಜಾದೇವಿ ಅವರು ತುಂಬಾನೇ ಆತ್ಮೀಯರಾಗಿದ್ರು. ನೀನು ಗೌಡರನ್ನು ಮದುವೆಯಾಗಿ ಗೌಡ್ತಿ ಆಗಿದ್ದೀಯಾ ಅಂದಿದ್ರು. ಶಿಸ್ತು, ಮಾರ್ಯಾದೆ ಏನೂ ಅನ್ನೋದನ್ನು ಅವರನ್ನು ನೋಡಿ ಕಲಿಯಬೇಕು ಎಂದು ನಟಿ ಮಾಲಾಶ್ರೀ ಕಂಬನಿ ಮಿಡಿದರು.
ಸರೋಜಾದೇವಿ ಅವರು ನಮಗೆಲ್ಲ ಹೇಗಿರಬೇಕು ಎಂದು ಹೇಳಿಕೊಡುತ್ತಿದ್ದರು. ರಿಯಲ್ ಸೂಪರ್ ಸ್ಟಾರ್ ಅವರು. ಈ ವಯಸ್ಸಲ್ಲೂ ಅವರು ತುಂಬಾನೇ ಸುಂದರವಾಗಿ ಕಾಣುತ್ತಿದ್ದರು. ಪುಟ್ಮಲ್ಲಿ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದೆ. ಅವರ ಸಿನಿಮಾಗಳೆಲ್ಲವೂ ನನಗಿಷ್ಟ. ಸ್ಟೈಲ್, ಯೂನಿಕ್ ಆ್ಯಕ್ಟಿಂಗ್ನಿಂದ ಅವರು ಫೇಮಸ್ ಎಂದು ನಟಿ ಮಾಲಾಶ್ರೀ ಸ್ಮರಿಸಿದರು.