ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
“ಸಹನೆಯ ಸಾಕಾರಮೂರ್ತಿ ಶ್ರೀಮಾತೆ ಶಾರದಾದೇವಿ”. ಶ್ರೀಮಾತೆಯವರ ತಾಳ್ಮೆ ಶ್ಲಾಘನೀಯ ಎಂದು ಹೇಳಬಹುದು. ಅವರು ತಮ್ಮ ಜೀವನದುದ್ದಕ್ಕೂ ತಾಳ್ಮೆಯ ಮೂರ್ತಿಯಾಗಿದ್ದರು. ಶ್ರೀರಾಮಕೃಷ್ಣರ ಮಹಾಸಮಾಧಿಯ ನಂತರ ಶ್ರೀಮಾತೆಗೆ ಈ ಭೂಮಿಯ ಮೇಲೆ ತಮ್ಮ ಪಾತ್ರವೇನಿದೆ ಎಂದೆನಿಸಿ ಒಮ್ಮೆ ಸಮಾಧಿ ಸ್ಥಿತಿಯಲ್ಲಿದ್ದಾಗ ತಾವು ಶ್ರೀರಾಮಕೃಷ್ಣರ ಹತ್ತಿರ ಮಾತಾಡುವವರಂತೆ ಹೇಳಿಕೊಳ್ಳುತ್ತಾರೆ, ನಾನು ಬರುತ್ತೇನೆ ಎಂದು ಭರವಸೆ ನೀಡಿದ್ದರು.
ಆಗ ಶ್ರೀರಾಮಕೃಷ್ಣರು ಒಂದು ಮಗುವನ್ನು ತೋರಿಸಿ ನೀನು ಈ ಮಗುವಿಗಾಗಿ ಬದುಕಬೇಕು ಎಂದು ಒಂದು ಮಗುವನ್ನು ತೋರಿಸುತ್ತಾರೆ.
ಆ ಮಗುವೇ ಸುರಭಾಲೆಯ ಮಗಳು ರಾಧಿ ಅವಳೇ ಶ್ರೀಮಾತೆಯವರನ್ನು ಈ ಭೂಮಿಯಲ್ಲಿ ಸೆಳೆದಿಡುವ ಮಾಯೆಯಾಗಿದ್ದಾಳೆ. ಮುಂದೊಂದು ದಿನ ಶ್ರೀರಾಮಕೃಷ್ಣರು ಅಂದು ತೋರಿಸಿದ ಮಗು ರಾಧಿಯೇ ಎಂದು ಶ್ರೀಮಾತೆಗೆ ತಿಳಿಯುತ್ತದೆ.
ತಮ್ಮ ಸೋದರ ಅಭಯಚರಣನ ಪತ್ನಿ ಯಾದಂತಹ ಸುರಭಾಲೆ ತನ್ನ ಪತಿ ಹಾಗೂ ತನ್ನ ಹಾರೈಕೆ ಮಾಡಿದ ಅಜ್ಜಿ ಇಬ್ಬರನ್ನೂ ಕಳೆದುಕೊಂಡು ಅರೆ ಹುಚ್ಚಿಯೇ ಆಗುತ್ತಾಳೆ. ಅವಳು ತನ್ನ ಹುಚ್ಚುತನದಿಂದ ಶ್ರೀಮಾತೆಯವರಿಗೆ ಎಷ್ಟು ನೋವು ನೀಡುತ್ತಾಳೆ. ಆದರೆ ಅವರು ಅದನ್ನೆಲ್ಲಾ ತಾಳ್ಮೆಯಿಂದ ಸಹಿಸಿಕೊಳ್ಳುತ್ತಾರೆ.
ಒಮ್ಮೆ ಸುರಭಾಲೆ ತನ್ನ ಒಡವೆ ಕಳೆದುಹೋದ ಆರೋಪವನ್ನು ಶ್ರೀಮಾತೆಯವರ ಮೇಲೆ ಹೊರಿಸುತ್ತಾಳೆ. ಆಗ ಶ್ರೀಮಾತೆಯರು ಹೇಳುತ್ತಾರೆ, ನೋಡು ಆ ಒಡವೆ ಏನಾದರೂ ನನ್ನ ಬಳಿ ಇದ್ದಿದ್ದರೆ ಅದನ್ನು ಕಸದ ಹಾಗೆ ಬಿಸಾಡುತ್ತಿದ್ದೆ.ನಂತರ ತಿಳಿಯುತ್ತದೆ ಆ ಒಡವೆ ತೆಗೆದು ಕೊಂಡು ಹೋದವನು ಸುರಭಾಲೆಯ ತಂದೆ ಎಂದು.ಇದನ್ನು ತಿಳಿದ ಶ್ರೀಮಾತೆಯವರು ತಮ್ಮ ಶಿಷ್ಯರನ್ನು ಕಳುಹಿಸಿ ಸುರಭಾಲೆಯ ಒಡವೆಗಳನ್ನು ತರಿಸಿಕೊಡುತ್ತಾರೆ.
ಈ ರೀತಿ ಶ್ರೀಮಾತೆಯವರು ಆರೋಪ ಮುಕ್ತರಾಗುತ್ತಾರೆ. ಇನ್ನೊಮ್ಮೆ ಸುರಭಾಲೆ ಸುಡುವ ಕೊಳ್ಳಿಯಿಂದ ಶ್ರೀಮಾತೆಯವರ ಮುಖಕ್ಕೆ ತಿವಿಯಲು ಬರುತ್ತಾಳೆ. ಆಗ ಮಾತ್ರ ಶ್ರೀಮಾತೆಯವರು ತಾಳ್ಮೆಯ ಗೆರೆಯನ್ನು ದಾಟಿ ‘ಹೇ ಹುಚ್ಚಿ ನಿನ್ನ ಕೈ ಬಿದ್ದು ಹೋಗ‘ ಎಂದು ಆತುರದಲ್ಲಿ ಹೇಳಿದ ಮಾತನ್ನು ನೆನಪಿಸಿಕೊಂಡು ಬಹಳ ಸಂಕಟ ಪಡುತ್ತಾರೆ.
ನಿಜಕ್ಕೂ ಶ್ರೀಮಾತೆಯವರು ಹೇಳಿದ ಮಾತು ಅಕ್ಷರಶಃ ನಿಜವಾಗುತ್ತದೆ. ಸುರಭಾಲೆಯ ಕೈಗಳು ಬಿದ್ದು ಹೋಗುವ ಸ್ಥಿತಿಯೇ ಬಂದಾಗ ಶ್ರೀಮಾತೆಯವರು ಬಹಳ ಮರುಗುತ್ತಾರೆ. ಛೆ ನನ್ನ ಬಾಯಲ್ಲಿ ಈ ರೀತಿಯ ಮಾತು ಬರಬಾರದಿತ್ತು ಎಂದು ನೊಂದು ಕೊಳ್ಳುತ್ತಾರೆ. ಹೀಗೆ ಶ್ರೀಮಾತೆ ಶಾರದಾದೇವಿಯವರ ಜೀವನದಲ್ಲಿ ವ್ಯಕ್ತವಾಗುವ ಸಹನೆಯ ಆದರ್ಶ ನಮ್ಮೆಲ್ಲರ ನಿತ್ಯ ಬದುಕಿಗೆ ದಾರಿದೀಪವಾಗಲಿ ಎಂದು ಆಶಿಸುತ್ತೇನೆ.
ಲೇಖನ-ವೈ,ಶಶಿಕಲಾ, ಹಿಂದಿ ಭಾಷಾ ಸಹಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಜೆ.ಎನ್.ಕೋಟೆ, ಚಿತ್ರದುರ್ಗ ತಾಲೂಕು.

