ಸ್ಯಾನ್ ಫ್ರಾನ್ಸಿಸ್ಕೊ, ಶಾಂಘೈನಲ್ಲಿ ಕಟ್ಟಡ ಸ್ಥಳಾಂತರ ಮಾಡಿದಂತೆ ಹಿರಿಯೂರಿನಲ್ಲೂ ಇಡೀ ಬೃಹತ್ ಕಟ್ಟಡ ಶಿಫ್ಟ್ ಆಗಲಿದೆ

News Desk

ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಸ್ಯಾನ್ ಫ್ರಾನ್ಸಿಸ್ಕೊ, ಶಾಂಘೈ ಸೇರಿದಂತೆ ದೇಶ-ವಿದೇಶಗಳಲ್ಲಿ ಆಧುನಿಕ ತಂತ್ರಜ್ಞಾನ, ಕೌಶಲ್ಯ ಬಳಸಿ ಇಡೀ ಕಟ್ಟಡ ಶಿಫ್ಟ್(ಸ್ಥಳಾಂತರ) ಮಾಡುತ್ತಿದ್ದ ಕಾರ್ಯವನ್ನು ಆತ್ತ ಮಹಾನಗರದಂತ ಕೇಂದ್ರವೂ ಅಲ್ಲದ, ಇತ್ತ ದೊಡ್ಡ ನಗರವೂ ಅಲ್ಲದ ದೊಡ್ಡ ಗ್ರಾಮದಂತಿರುವ ಹಿರಿಯೂರಿನಲ್ಲಿ ಮಾಡಲಾಗುತ್ತಿದೆ. ಇದು ಅಚ್ಚರಿ ಆದರೂ ಸತ್ಯ.
ಹಿರಿಯೂರು ರಸ್ತೆ ಅಗಲೀಕರದಿಂದಾಗಿ ಈ ಬೃಹತ್ ಕಟ್ಟಡವನ್ನು ಮೂಲ ಜಾಗದಿಂದ ಸುಮಾರು 20 ಅಡಿಗಳಷ್ಟು ಹಿಂದಕ್ಕೆ ಇಡೀ ಕಟ್ಟಡವನ್ನ ಸ್ಥಳಾಂತರ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ…!

ಅರೇ ಇಸ್ಕಿ… ಕಟ್ಟಡ ಸ್ಥಳಾಂತರನಾ…? ಇದು ಸಾಧ್ಯನಾ…? ಅದೂ ಜಾಕ್ ಗಳನ್ನು ಬಳಸಿ ಹಿಂದಕ್ಕೆ ಜರುಗಿಸುವ ಅಥವಾ ಕಟ್ಟಡದ ಸಾಗಾಟನಾ…? ಎಂದು ನೀವು ಅಚ್ಚರಿಪಡಬಹುದು… ಖಂಡಿತಾ ನಿಮ್ಮಲ್ಲಿ ಇಂತಹ ಅಚ್ಚರಿ ಮೂಡಿದ್ದರೆ ಅದೇನು ತಪ್ಪಲ್ಲ. ಈ ವಿಷಯ ಕೇಳಿದ ಯಾರಾದರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯಚಕಿತರಾಗುವಂತ ವಿಚಾರವೇ ಆಗಿದೆ.

ಸದ್ಯ ಅಂತಹದ್ದೇ ಒಂದು ಅಚ್ಚರಿಯ ದೃಶ್ಯವನ್ನು ನೋಡಲು ಸಾಲುಗಟ್ಟಿ ಜನ ನಿಲ್ಲುತ್ತಿದ್ದಾರೆ. ಎಲ್ಲರಿಗೂ ಬೃಹತ್ ಕಟ್ಟಡದ ಸ್ಥಳಾಂತರ ಕುತೂಹಲ ತಂದಿದೆ. ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ಜೊತೆಯಲ್ಲಿ ಅಗತ್ಯ ವ್ಯವಸ್ಥೆಗಳು ಪೂರ್ಣಗೊಂಡ ಬಳಿಕ ಕಟ್ಟಡದ ಸ್ಥಳಾಂತರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.

ಆಧುನಿಕ ತಂತ್ರಜ್ಞಾನ, ತಜ್ಞರ ಸಲಹೆ, ಸೂಚನೆ, ಕೌಶಲ್ಯಗಳನ್ನು ಬಳಸಿಕೊಂಡು ಹಿರಿಯೂರು ನಗರದ ಮೂರಂತಸ್ತಿನ ಕಟ್ಟಡವನ್ನು ಸುಮಾರು 20 ಅಡಿಗಳಷ್ಟು ಹಿಂದಕ್ಕೆ ತಳ್ಳುವ(ಸ್ಥಳಾಂತರ) ಕಾಮಗಾರಿ ಹಿರಿಯೂರು ಮುಖ್ಯ ರಸ್ತೆಯ ಉದಯ ಹೋಟೆಲ್ ಇದ್ದ ಬೃಹತ್ ಕಟ್ಟಡದಲ್ಲಿ ಆರಂಭಗೊಂಡಿದೆ.

ನಗರದ ಅವಧಾನಿ ಬಡಾವಣೆ ಬಳಿಯ ಉದಯ ಹೋಟೆಲ್ ಕಟ್ಟಡವನ್ನು  ಹಿಂದಕ್ಕೆ ತಳ್ಳಿ ಯಥಾಸ್ಥಿತಿಯಲ್ಲಿಯೇ ಕೂರಿಸುವ ಕಾಮಗಾರಿಯ ಮೊದಲ ಭಾಗವಾಗಿ ಸೋಮವಾರ ಸುಮಾರು ಎರಡೂವರೆ ಅಡಿಯಷ್ಟು ಹಿಂದಕ್ಕೆ ಜರುಗಿದ್ದು ಈ ದೃಶ್ಯ ವೈರಲ್ ಆಗಿದೆ.

ನಗರದ ಟಿಬಿ ವೃತ್ತದಿಂದ ಗಾಂಧಿ ವೃತ್ತದವರೆಗಿನ ಮುಖ್ಯರಸ್ತೆಯನ್ನು 21 ಮೀಟರ್ ನಷ್ಟು ಅಗಲೀಕರಣ ಪ್ರಾರಂಭವಾದ ಹಿನ್ನೆಲೆಯಲ್ಲಿ ರಸ್ತೆ ಆಸುಪಾಸಿನ ಬಹುತೇಕ ಕಟ್ಟಡಗಳ ಮುಂಭಾಗವನ್ನು ಹೊಡೆದು ಹಾಕಲಾಯಿತು. ಕಟ್ಟಡ ಹೊಡೆಯುವ ಕಾರ್ಯದಲ್ಲಿ ದೇವಸ್ಥಾನಗಳು ಸೇರಿವೆ.
ಆದರೆ ಉದಯ ಹೋಟೆಲ್ ನ ಮುಂಭಾಗದ ಸ್ವಲ್ಪ ಕಟ್ಟಡವನ್ನು ಹೊಡೆಯಲು ಮಾಡಲು ಗುರ್ತಿಸಲಾಗಿತ್ತು. ಕಟ್ಟಡದ ಅರ್ಧ ಭಾಗ ರಸ್ತೆ ವಿಸ್ತರಣೆಗೆ ಹೋಗುವ ಸ್ಥಿತಿಯಲ್ಲಿದ್ದದ್ದರಿಂದ ಕಟ್ಟಡ ಮಾಲೀಕರು ಅವರದೇ ಹಿಂದಿನ ಖಾಲಿ ಜಾಗಕ್ಕೆ ಕಟ್ಟಡ ಜರುಗಿಸಿಕೊಳ್ಳುವ ನಿರ್ಧಾರ ಮಾಡಿದರು.

ತಮಿಳುನಾಡಿನಿಂದ ತರಿಸಲಾಗಿರುವ ಹೈಡ್ರಾಲಿಕ್ ಜಾಕ್ ಬಳಸಿ ಕಟ್ಟಡ ತಳ್ಳುವ ಪಾರಮೌಂಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ಹೋಟೆಲ್ ಕಟ್ಟಡದ ಮಾಲೀಕರು ಸುಮಾರು 20 ಅಡಿಯಷ್ಟು ಕಟ್ಟಡವನ್ನು ಹಿಂದೆ ತಳ್ಳುವ ಕಾಮಗಾರಿಯನ್ನು 18 ಲಕ್ಷ ಹಣಕ್ಕೆ ನೀಡಿದ್ದಾರೆ. ಇದೀಗ 37 ಅಡಿ ಉದ್ದ, 37 ಅಡಿ ಅಗಲದ ಮೂರಂತಸ್ತಿನ ಕಟ್ಟಡವನ್ನು ಸುಮಾರು 400ಕ್ಕೂ ಹೆಚ್ಚು ಹೈಡ್ರಾಲಿಕ್ ಜಾಕ್ ಬಳಸಿಕೊಂಡು ಹಿಂದಕ್ಕೆ ಸ್ಥಳಾಂತರಿಸುವ ಕಾಮಗಾರಿ ಭರದಿಂದ ಸಾಗಿದೆ.

ಹಿಂದೆಯೂ ಕಟ್ಟಡ ಸರಿಸಲಾಗಿತ್ತು-
ಹಿರಿಯೂರು ನಗರಕ್ಕೆ ಕಟ್ಟಡ ಸರಿಸುವ ಕೆಲಸ ಹೊಸದೇನಲ್ಲ. ಈಗಾಗಲೇ ಅಕ್ಷಯ ಪುಡ್ ಪಾರ್ಕ್ ಕಟ್ಟಡವನ್ನು
100 ಅಡಿಯಷ್ಟು ಹಿಂದೆ ಸರಿಸಲಾಗಿತ್ತು. ಶ್ರೀನಿವಾಸ ಲಾಡ್ಜ್, ವೇದಾವತಿ ನಗರದ ಮಸೀದಿ ಹಾಗೂ  ಪುಷ್ಪಾಂಜಲಿ ಚಿತ್ರಮಂದಿರದ ಬಳಿಯ ಬಿಲ್ಡಿಂಗ್ ಗಳನ್ನು ಈಗಾಗಲೇ ಸ್ಥಳಾಂತರ ಮಾಡಿ ಯಶಸ್ವಿ ಕಾಣಲಾಗಿತ್ತು. ಇದೀಗ ಹಿಂದಿನ ಕಟ್ಟಡಗಳ ಸಾಲಿಗೆ ಉದಯ ಹೋಟೆಲ್ ಕಟ್ಟಡ ಸೇರಿಕೊಂಡಿದ್ದು ಪ್ರತಿದಿನ 4 ರಿಂದ 5 ಅಡಿಯಷ್ಟು ಹಿಂದಕ್ಕೆ ತಳ್ಳುವ ಗುರಿ ಇಟ್ಟುಕೊಂಡು ಕೆಲಸ ಆರಂಭಿಸಿದ್ದಾರೆ.

ಇಡೀ ಕಟ್ಟಡ ತಳ್ಳುವ ಮೊದಲು ಕಟ್ಟಡದ ಒಳಭಾಗದಲ್ಲಿರುವ ಮಣ್ಣನ್ನು ಹೊರಗಡೆ ತೆಗೆದು ಹಾಕಲಾಗಿದೆ. ಜೊತೆಯಲ್ಲಿ ಕಟ್ಟಡದ ಹೊರ ಭಾಗದ ನಾಲ್ಕು ದಿಕ್ಕುಗಳ ಗೋಡೆಗಳನ್ನು ಜಾಕ್ ಕೂರಿಸಿ ಬಿಡಿಸಲಾಗಿದೆ. ಬಳಿಕ ಮಧ್ಯ ಭಾಗದಲ್ಲಿರುವ ಪಿಲ್ಲರ್ ಕಂಬಗಳಿಗೂ ಜಾಕ್ ಕೂರಿಸಲಾಗಿದೆ. ನಂತರ ತಳಪಾಯದ ಸುತ್ತಲಿನ ಮಣ್ಣು ತೆಗೆದು ಕಟ್ಟಡದ ಗೋಡೆ ಮತ್ತು ಪಿಲ್ಲರ್ ಗಳ ಜಾಗದಲ್ಲಿ ಸುಮಾರು ಅರ್ಧಯಿಂದ ಒಂದು ಅಡಿಯಷ್ಟು ದೂರಕ್ಕೆ ಜಾಕ್ ಗಳನ್ನು ಅಳವಡಿಸಲಾಗಿದೆ.
ಕಟ್ಟಡದ ಕಿಟಕಿ
, ಬಾಗಿಲು ಸೇರಿದಂತೆ ಖಾಲಿ ಜಾಗಗಳಿಗೆ ಇಟ್ಟಿಗೆಗಳಿಂದ ಗೋಡೆ ನಿರ್ಮಾಣ ಮಾಡಲಾಗುತ್ತದೆ. ಕಟ್ಟಡ ತಳ್ಳುವ ಜಾಗದಲ್ಲಿ ಹೊಸ ತಳಪಾಯ ಸಿದ್ದಪಡಿಸಿಕೊಂಡಿದ್ದಾರೆ. ಕಬ್ಬಿಣದ ಆಂಗ್ಲರ್ ಗಳೊಂದಿಗೆ ಗಾಲಿ ಚಕ್ರದ ಜಾಕ್ ಅಳವಡಿಸಿಕೊಂಡು ಕಟ್ಟಡವನ್ನು ಇಂಚು ಇಂಚಾಗಿ ಸರಿಸುತ್ತಾ ಹೋಗುತ್ತಾರೆ. ಇದು ಕಟ್ಟಡ ತೆರವು ಮಾಡಿಕೊಂಡು ಮತ್ತೆ ಕಟ್ಟಿಸಿಕೊಳ್ಳುವುದಕ್ಕಿಂತ ಕಡಿಮೆ ಖರ್ಚಿನ ಕೆಲಸ ಎನ್ನಲಾಗಿದ್ದು ಸೋಮವಾರ ಉದಯ ಹೋಟೆಲ್ ಕಟ್ಟಡವನ್ನು ಹಿಂದಕ್ಕೆ ಸರಿಸುವ ಕಾರ್ಯ ಆರಂಭವಾಗಿದ್ದು ಜನರು ಆಶ್ಚರ್ಯಚಕಿತರಾಗಿ ನೋಡುತ್ತಿರುವ ದೃಶ್ಯಗಳು ಲೈರಲ್ ಆಗಿವೆ.

ಪಾರಮೌಂಟ್ ಬಿಲ್ಡಿಂಗ್ ಶಿಫ್ಟ್ ಕಂಪನಿ ಮಾಲೀಕ ಸಿ ಮೋಹನ್ ರಾಜ್ ಮಾತನಾಡಿ ಆಧುನಿಕ ಯುಗದಲ್ಲಿ ಕೌಶಲ್ಯದೊಂದಿಗೆ ನುರಿತ ಕಾರ್ಮಿಕರನ್ನು ಬಳಸಿ ತಂತ್ರಜ್ಞಾನ ಬಳಸಿಕೊಂಡು ಬಹುಮಹಡಿ ಕಟ್ಟಡಗಳನ್ನು ಸ್ಥಳಾಂತರ ಮಾಡಲಾಗಿದೆ. ಹಿರಿಯೂರಿನಲ್ಲಿ ನಾಲ್ಕು ಕಟ್ಟಡ ಸ್ಥಳಾಂತರ ಮಾಡಿದ್ದು ಇದು 5 ನೇ ಕಟ್ಟಡ. ಇಡೀ ಕಟ್ಟಡ ಸ್ಥಳಾಂತರಿಸಲು 3 ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದು ಇನ್ನೊಂದು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಕಟ್ಟಡ ಸ್ಥಳಾಂತರ ಮಾಡುವುದರಿಂದ ಕಟ್ಟಡಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಹೊಸ ಜಾಗಕ್ಕೂ ಸಹ ಕಟ್ಟಡ ಯಥಾವತ್ತಾಗಿ ಬಂದು ಕೂರುತ್ತದೆ. ಕಟ್ಟಡ ಸೇರಿದಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಅಪಾಯ ಆಗದಂತೆ, ಭವಿಷ್ಯದಲ್ಲೂ ಭದ್ರವಾಗಿರುವಂತೆ ರಕ್ಷಣಾತ್ಮಕ ಸಿದ್ದತೆಗಳನ್ನು ಬಳಸಿಕೊಂಡು ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.

ಅಭಿನಂದನೆಗಳು-
ನಗರದ ಟಿ ಬಿ ವೃತದಿಂದ ರಸ್ತೆ ಅಗಲೀಕರಣ ನಡೆಯುತ್ತಿದ್ದು ರಸ್ತೆಗೆ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿದ ಕಟ್ಟಡ ಮಾಲೀಕರಿಗೆ ಹೆಚ್ಚುವರಿ ಕಟ್ಟಡ  ತೆರವುಗೊಳಿಸುವಂತೆ ತಿಳಿಸಲಾಗಿತ್ತು. ಉದಯ ಹೋಟೆಲ್ ಕಟ್ಟಡದ ಮಾಲೀಕ ಎಸ್ ಮಣಿಯವರು ಕಟ್ಟಡವನ್ನು ಚೆನ್ನೈ ಮೂಲದ ಬಿಲ್ಡಿಂಗ್ ಲಿಫ್ಟಿಂಗ್ ಸರ್ವಿಸ್ ಸಿ ಮೋಹನ್ ರಾಜ್ ಅವರಿಂದ ಜಾಕ್ ಮೂಲಕ ಹಿಂದೆ ಸರಿಸುವ ಕಾರ್ಯ ಆರಂಭಿಸಿದ್ದಾರೆ.

ನಗರ ಸಭೆ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡದೆ ಕಟ್ಟಡ ಶಿಫ್ಟ್ ಮಾಡಲು ಪರವಾನಗಿ ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಜೆ ಆರ್ ಅಜಯ್ ಕುಮಾರ್, ಪೌರಯುಕ್ತ ಎಂ ವಾಸಿಮ್, ನಗರಸಭೆ ಸದಸ್ಯ ಎಂ ಡಿ ಸಣ್ಣಪ್ಪ, ಸಾದತ್ ವುಲ್ಲಾ ಅವರು ತಿಳಿಸಿದರು.

 

 

- Advertisement -  - Advertisement -  - Advertisement - 
Share This Article
error: Content is protected !!
";