ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸುತ್ತ ಮುತ್ತಲಿನ ಪುರಾತನ ಕ್ಷೇತ್ರಗಳ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದ್ದು ಯುಗಾದಿ ಹಬ್ಬದ ಮುನ್ನ ದಿನ ಅಮಾವಾಸ್ಯೆಯೊಂದು ದೇವಸ್ಥಾನದ ಒಳ ಭಾಗದಲ್ಲಿ ವಾಮಾಚಾರ ಮಾಡಿ ನಿಧಿಗಾಗಿ ಕಳ್ಳರು ಶೋಧ ನಡೆಸಿರುವ ಘಟನೆ ಸಂಭವಿಸಿದೆ.
ದೊಡ್ಡಬಳ್ಳಾಪುರ ತಾಲೂಕು ಯದ್ದಲಹಳ್ಳಿ ಸಮೀಪದ ಬೆನಕನಹಳ್ಳದ ಶ್ರೀಬೆನಕಪ್ಪ ದೇವಸ್ಥಾನದಲ್ಲಿ ನಿಧಿಗಾಗಿ ನಿಧಿಗಳ್ಳರು ಶೋಧ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಯುಗಾದಿ ಅಮಾವಾಸ್ಯೆಯ ಭಾನುವಾರ ದಿನ ದೇವಸ್ಥಾನದಲ್ಲಿ ನಿಧಿಗಳ್ಳತನಕ್ಕೆ ಯತ್ನಿಸಿರುವ ಕಳ್ಳರು ಪುರಾತನ ಛತ್ರ ವಿರೂಪಗೊಳಿಸಿದ್ದಾರೆ. ನಿಧಿ ಶೋಧಕ್ಕಾಗಿ ದಿಗ್ಬಂಧನ, ಪೂಜೆ ಮೂಲಕ ವಾಮಾಚಾರ ನಡೆಸಿರುವ ಹಿನ್ನೆಲೆ ದೇವಾಲಯದ ಬಳಿ ಹೋಗಲು ಗ್ರಾಮಸ್ಥರು ಹೆದರುತ್ತಿದ್ದಾರೆ.
ಈ ಸಂದರ್ಭದಲ್ಲಿ ಆರ್ಚಕರ ಸಂಬಂಧಿ ಉದಯ ಆರಾಧ್ಯ ಮಾತನಾಡಿ, ತಾಲೂಕಿನಲ್ಲಿ ದೇವಾಲಯಗಳ ಹುಂಡಿ ಕಳ್ಳತನ ಪ್ರಕರಣಗಳ ಜೊತೆಗೆ ಈಗ ನಿಧಿಗಳ್ಳರ ಹಾವಳಿ ಶುರುವಾಗಿದೆ.
ಇತ್ತೀಚಿಗೆ ಘಾಟಿ ಸುಬ್ರಹ್ಮಣ್ಯ ರಸ್ತೆಯ ದೇವರ ಬೆಟ್ಟದಲ್ಲಿರುವ ಗುಟ್ಟೆ ನರಸಿಂಹಸ್ವಾಮಿ ದೇವಾಲದಲ್ಲಿ ಇದೇ ಮಾದರಿಯ ಶೋಧ ನಡೆಸಿ ಕಲ್ಲಿನ ಮೂರ್ತಿಯನ್ನೇ ಅಪಹರಿಸಿದ್ದ ಘಟನೆಯೂ ಜರುಗಿತ್ತು. ನಿರ್ಜನ ಪ್ರದೇಶದಲ್ಲಿರುವ ಪುರಾತನ ದೇವಸ್ಥಾನಗಳಿಗೆ ಭದ್ರತೆ ಒದಗಿಸಬೇಂದು ಭಕ್ತಾದಿಗಳು ಮತ್ತು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.