ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ತ್ರಿವಿಧ ದಾಸೋಹದ ಮಡಿಲಲ್ಲಿ ಕೋಟ್ಯಂತರ ಜನರನ್ನು ಬೆಳೆಸಿದ ಕೀರ್ತಿ ನಮ್ಮ ಮಠಮಾನ್ಯಗಳಿಗೆ ಸಲ್ಲುತ್ತದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಮೈಸೂರಿನ ಹುಲ್ಲಿನ ಬೀದಿಯಲ್ಲಿ ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠ ಹಾಗೂ ವಿದ್ಯಾರ್ಥಿನಿಲಯದ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೂರು ಶಾಖಾ ಮಠಗಳನ್ನು ಹೊಂದಿರುವ ಶ್ರೀಮಠ ಎಂದೂ ಲೌಕಿಕ ಪ್ರಭಾವಗಳನ್ನು ತನ್ನ ಹತ್ತಿರ ಸುಳಿಯಲು ಬಿಡಲಿಲ್ಲ, “ಅನ್ನದಾಸೋಹ ಪರಮ ಶ್ರೇಷ್ಠ, ಜ್ಞಾನ ದಾಸೋಹ ತನ್ನ ಸಂಕಲ್ಪ” ಎಂದು ಇವತ್ತಿನವರೆಗೂ ಸೇವೆ ಸಲ್ಲಿಸುತ್ತಿರುವುದರ ಪರಿಣಾಮ ಈ ಭಾಗದಲ್ಲಿ ಲಕ್ಷಾಂತರ ಜನ ವಿದ್ಯೆಯನ್ನು ಕಲಿತು ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಿಜಯೇಂದ್ರ ಹೇಳಿದರು.
ಮಠದ ಆಸರೆಯನ್ನು ಬಯಸಿ ಬಂದ ಪ್ರತಿಯೊಬ್ಬರಿಗೂ ಮಾತೃ ಹೃದಯದ ಪ್ರೀತಿಯನ್ನು ದಾರೆ ಎರೆದು ಆಸರೆ ನೀಡುತ್ತಾ ಬಂದಿರುವ ದೇವನೂರು ಮಠದ ಗುರು ಮಲ್ಲೇಶ್ವರರು ಇತಿಹಾಸ ನಿರ್ಮಿಸಿದ ಮಹಾನ್ ತಪಸ್ವಿಗಳು, ಸತ್ಯ, ನಿಷ್ಠೆ, ನ್ಯಾಯ, ಧರ್ಮವನ್ನು ಮನುಕುಲಕ್ಕೆ ಪರಿಚಯಿಸಿದ ಕೀರ್ತಿ ಗುರುಮಲ್ಲೇಶ್ವರರ ಸನ್ನಿಧಾನಕ್ಕೆ ಸಲ್ಲುತ್ತದೆ. ಆದ್ದರಿಂದ ಮಠಮಾನ್ಯಗಳ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜದ ಬಂಧುಗಳು ಹಾಗೂ ಶ್ರೀಮಠದ ಭಕ್ತಾದಿಗಳು ಶರಣ ತತ್ವ ಅನುಸರಿಸಿ ಮುನ್ನಡೆಯಬೇಕೆಂಬ ಮನವಿ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ ಶಿವಸಿದ್ಧೇಶ್ವರ ಶ್ರೀಗಳು, ದೇವನೂರು ಮಠದ ಪರಮಪೂಜ್ಯ ಶ್ರೀ ಮಹಾಂತ ಶ್ರೀಗಳು, ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.

