ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತರು, ಕಾರ್ಮಿಕರು, ದುಡಿಯುವ ವರ್ಗದವರನ್ನು ಗುಲಾಮಗಿರಿಗೆ ತಳ್ಳುತ್ತಿರುವ ಕೇಂದ್ರ ಸರ್ಕಾರ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಸಂಯುಕ್ತ ಹೋರಾಟ ಸಮಿತಿಯ ಜೆ.ಯಾದವರೆಡ್ಡಿ ಕೋಮುವಾದಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ-ಜೆಸಿಟಿಯು, ಕರ್ನಾಟಕ ಸಂಯುಕ್ತ ಹೋರಾಟ ವತಿಯಿಂದ ಗುರುವಾರ ನಡೆದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ವಾರದ ರಜೆ, ಕೆಲಸದ ಭದ್ರತೆಗಾಗಿ ಅನೇಕ ಕಾಮ್ರೆಡ್‌ಗಳ ತ್ಯಾಗ ಬಲಿದಾನದಿಂದ ಕಾರ್ಮಿಕರು ರೈತರ ಪರವಾಗಿ ಕೆಲವು ಕಾನೂನುಗಳು ಜಾರಿಗೆ ಬಂದವು. ಕೇಂದ್ರ ಸರ್ಕಾರ ೨೮ ಕಾಯಿದೆಗಳಲ್ಲಿ ಎಲ್ಲವನ್ನು ರದ್ದುಪಡಿಸಿರುವುದರಿಂದ ಕೇವಲ ನಾಲ್ಕು ಕಾಯಿದೆಗಳು ಮಾತ್ರ ಉಳಿದುಕೊಂಡಿದೆ. ಕಾರ್ಮಿಕರು ಉತ್ಪಾದನೆ, ರೈತರು ದುಡಿಯುವುದನ್ನು ನಿಲ್ಲಿಸಿದರೆ ದೇಶ ನಾಶವಾಗುತ್ತದೆನ್ನುವ ಅರಿವು ಆಳುವ ಸರ್ಕಾರಗಳಿಗಿಲ್ಲದಂತಾಗಿದೆ. ಗ್ರಾಮೀಣ ಪ್ರದೇಶಗಳ ಜನರಿಗೆ ವರದಾನವಾಗಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ವಿಬಿಜಿರಾಮ್‌ಜಿ ಎಂದು ಬದಲಾಯಿಸಿರುವುದು ಅತ್ಯಂತ ಖಂಡನೀಯ ಎಂದರು.
ವಿದ್ಯುತ್ ಖಾಸಗೀರಕಣವಾದರೆ ರೈತರು ಉಳಿಯುವುದಿಲ್ಲ. ಕಾರ್ಮಿಕರಿಗೆ ಅನ್ಯಾಯ ಮಾಡಿದ ಯಾವ ದೇಶವು ಏಳಿಗೆಯಾಗಿಲ್ಲ. ಕಾರ್ಪೊರೇಟ್, ಬಂಡವಾಳಶಾಹಿ ಉದ್ಯಮಿಗಳ ಜೊತೆ ಸೇರಿಕೊಂಡಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರು ಮತ್ತು ಕಾರ್ಮಿಕರನ್ನು ಕಡೆಗಣಿಸುತ್ತಿವೆ. ಇದರ ವಿರುದ್ದ ಈಗಲಾಗದರೂ ಎಚ್ಚೆತ್ತುಕೊಳ್ಳಬೇಕೆಂದರು.
ಸಿಪಿಐ. ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‌ಬಾಬು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೀಸಲಾಗಿರಿಸಿದ್ದ ೨೮ ಸಾವಿರ ಕೋಟಿ ರೂ.ಗಳ ಬಜೆಟನ್ನು ೧೮ ಸಾವಿರ ರೂ.ಗಳಿಗೆ ಇಳಿಸಲಾಗಿದೆ. ಸ್ವಾಮಿನಾಥನ್ ವರದಿಯನ್ನು ಇನ್ನು ಜಾರಿಗೆ ತಾರದ ಕಾರಣ ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಜಾತಿ ಧರ್ಮ ಬಿಟ್ಟು ಭಾರತ ನಮ್ಮದೆಂದು ಸೈದ್ದಾಂತಿಕವಾಗಿ ಒಪ್ಪಿಕೊಳ್ಳಬೇಕು. ಪುಕ್ಕಟೆಯನ್ನು ಎಲ್ಲಿಯವರೆಗೂ ತಿರಸ್ಕರಿಸುವುದಿಲ್ಲವೋ ಅಲ್ಲಿಯತನಕ ಜನರ ಉದ್ದಾರ ಸಾಧ್ಯವಿಲ್ಲ ಎಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಿ ನಿವೃತ್ತಿಯಾದವರಿಗೆ ಒಂದು ಲಕ್ಷ ರೂ.ಇಡಿ ಗಂಟು ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡುತ್ತ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಬ್ರಿಟೀಷರು ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದರು. ಈಗ ಆಳುವ ಸರ್ಕಾರಗಳು ಲೂಟಿಯಲ್ಲಿ ತೊಡಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೈತರು, ಕೂಲಿ ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲದಂತಾಗಿದೆ. ಚುನಾವಣೆಗೆ ಕೋಟಿಗಟ್ಟಲೆ ಹಣ ನೀಡಿದವರ ಸಾಲ ಮನ್ನ ಮಾಡುವ ಸರ್ಕಾರ ಬಡ ರೈತರ ಸಾಲ ಮನ್ನ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು?
ಎಐಯುಟಿಯುಸಿ ಜಿಲ್ಲಾ ಸಂಚಾಲಕ ಹೆಚ್.ರವಿಕುಮಾರ್ ಮಾತನಾಡಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಬಗ್ಗೆ ಕೇಂದ್ರ ಸರ್ಕಾರ ನಿಗಾಹರಿಸುತ್ತಿಲ್ಲ. ಕಾರ್ಮಿಕರಿಗೆ ಜೀವನ ಭದ್ರತೆಯಿಲ್ಲದಂತಾಗಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಕಡಿಮೆ ಬೆಲೆಗೆ ಸಿಗುವಂತಾಗಬೇಕು. ಎಲ್ಲಿಯವರೆಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವುದಿಲ್ಲವೋ ಅಲ್ಲಿಯತನಕ ರೈತ ಸಂಕುಲ ನಷ್ಟದಲ್ಲಿರುತ್ತದೆ ಎಂದು ಹೇಳಿದರು.
ಸಂವಿಧಾನವನ್ನು ಗಾಳಿಗೆ ತೂರಿರುವ ಆಳುವ ಸರ್ಕಾರಗಳು ರೈತರು, ಕಾರ್ಮಿರಿಗೆ ಅನುಕೂಲ ಮಾಡುತ್ತಿಲ್ಲದಿರುವುದರಿಂದ ಪರಿಸ್ಥಿತ ಹಗಗೆಟ್ಟಿದೆ. ಈಗಲಾದರೂ ಪ್ರತಿಯೊಬ್ಬರು ಜಾಗೃತರಾಗಿ ಜನವಿರೋಧಿ ಸರ್ಕಾರಗಳಿಗೆ ಬುದ್ದಿ ಕಲಿಸಬೇಕೆಂದು ಮನವಿ ಮಾಡಿದರು.
ಸಿ.ಕೆ.ಗೌಸ್‌ಪೀರ್ ಮಾತನಾಡುತ್ತ ಕೇಂದ್ರ ಸರ್ಕಾರದ ಕಾನೂನುಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಬಾರದು. ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ಗಾಂಧಿಯನ್ನು ಕೊಂದ ಗೋಡ್ಸ್ ಹೆಸರಿಟ್ಟಿರುವುದು ಅತ್ಯಂತ ಅಪಾಯಕಾರಿ. ಬಡವರು, ರೈತರ ಸಾಲ ಮನ್ನ ಮಾಡುತ್ತಿಲ್ಲ. ಉದ್ಯಮಿ, ಬಂಡವಾಳಶಾಹಿಗಳಿಗೆ ರೈತರ ಭೂಮಿಯನ್ನು ಮಾರಾಟ ಮಾಡುತ್ತಿವೆ. ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಇನ್ನು ಹಣ ನೀಡಿಲ್ಲ. ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಚಿತ್ರದುರ್ಗದ ಸಂಸದರು ಪಾರ್ಲಿಮೆಂಟ್‌ನಲ್ಲಿ ಜಿಲ್ಲೆಯ ಅಭಿವೃದ್ದಿ ಬಗ್ಗೆ ಚಕಾರವೆತ್ತುತ್ತಿಲ್ಲ. ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸೂಪರ್‌ಸೀಡ್ ಮಾಡುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಬಾರದೆಂದರು.
ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಧನಂಜಯ ಹಂಪಯ್ಯನಮಾಳಿಗೆ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಕಾಂ.ಟಿ.ಆರ್.ಉಮಾಪತಿ, ಈ.ಸತ್ಯಕೀರ್ತಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

