ಎಗ್ಗಿಲ್ಲದೆ ನಡೆಯುತ್ತಿರುವ ಶ್ರೀಗಂಧ ಮರಗಳ ಕಳ್ಳತನ, ಎಸ್ಪಿಗೆ ದೂರು ನೀಡಿದ ರೈತರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:ಜಿಲ್ಲೆಯ ಹಿರಿಯೂರು ತಾಲೂಕಿನಾದ್ಯಂತ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿನ ರೈತರು ತಮ್ಮ ಹೊಲಗಳಲ್ಲಿ ಬೆಳೆಸಿರುವ ಶ್ರೀಗಂಧದ ಮರಗಳನ್ನು ಕಳ್ಳ ಕಾಕರು ನಿರಂತರವಾಗಿ ಕಳ್ಳತನ ಮಾಡುತ್ತಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ರೀಗಂಧ ಮರಗಳ ಕಳವು ಮಾಡುವಂತ ಕಳ್ಳರ ಪತ್ತೆ ವಿಶೇಷ ತಂಡ ರಚನೆ ಮಾಡಿ ಶ್ರೀಗಂಧದ ಮರಗಳ ಕಳವು ಮಾಡುತ್ತಿರುವ ಕಳ್ಳರನ್ನು ಪತ್ತೆ ಮಾಡಿ ಕಠಿಣ ಕಾನೂನಾತ್ಮಕ ಶಿಕ್ಷೆ ನೀಡುವುದರ ಜೊತೆಯಲ್ಲಿ ರೈತರನ್ನು ರಕ್ಷಿಸುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರಿಗೆ ಮನವಿ ಸಲ್ಲಿಸಿ ಶ್ರೀಗಂಧ ಬೆಳೆಗಾರ ರೈತರು ಒತ್ತಾಯಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ರಿ.ಸ.ನಂ:13/3ರಲ್ಲಿ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳೆದ ಆಗಸ್ಟ್-12 ರಂದು ರಾತ್ರಿ ಸಮಯದಲ್ಲಿ ಕಡಿದು ಕಳ್ಳತನ ಮಾಡಿರುತ್ತಾರೆ. ಕಳ್ಳತನ ಪ್ರಕರಣ ಅಲ್ಲಿಗೆ ನಿಲ್ಲದೆ ಸೆಪ್ಟೆಂಬರ್-3 ರಂದು ಸಹ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಎಫ್.ಐ.ಆರ್ ದಾಖಲು ಮಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ರೀತಿಯಲ್ಲಿ ತನಿಖೆ ಮಾಡಿರುವುದಿಲ್ಲ. ಮತ್ತು ಸದರಿ ಜಮೀನಿನಲ್ಲಿರುವ ಗಂಧದ ಮರಗಳನ್ನು ಪದೇ ಪದೇ ಕಡಿಯುತ್ತಿರುತ್ತಾರೆ.

ಹಿರಿಯೂರು ತಾಲ್ಲೂಕಿನ ಕೆ.ಎಂ.ಕೊಟ್ಟಿಗೆ ಗ್ರಾಮದ ರಿ.ಸ.ನಂ:151/1 ರಲ್ಲಿ 3 ಎಕರೆ 16 ಗುಂಟೆ ಜಮೀನಿನಲ್ಲಿ ಶ್ರೀಗಂಧದ ಮರಗಳನ್ನು ಬೆಳೆಯಲಾಗಿದೆ. ಈ ಜಮೀನಿನಲ್ಲಿಯೂ ಮರಗಳನ್ನು ಕಳೆದ ಆಗಸ್ಟ್ 25 ರಂದು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿರುತ್ತಾರೆ. ಈ ಬಗ್ಗೆ ಕೂಡ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿರುತ್ತದೆ.

ಮತ್ತು ಹಿರಿಯೂರು ತಾಲ್ಲೂಕುನ ಗೋಗುದ್ದು ಗ್ರಾಮದ ರಿ.ಸ.ನಂ:65 ರ ಜಮೀನಿನಲ್ಲಿ ಶ್ರೀಗಂಧದ ಮರಗಳು ಇದ್ದು ಈ ಜಮೀನಿನಲ್ಲಿಯೂ ಸಹ ಶ್ರೀಗಂಧದ ಮರಗಳನ್ನು ಕಳೆದ 2023ನೇ ಸಾಲಿನ ಜೂನ್ 21 ರಂದು ರಾತ್ರಿಯ ಸಮಯದಲ್ಲಿ ಕಳ್ಳತನ ಮಾಡಿರುತ್ತಾರೆ. ಈ ಪ್ರಕರಣವು ಎಫ್.ಐ.ಆರ್ ಆಗಿದೆ. ಈ ಬಗ್ಗೆ ಪೊಲೀಸರು ಇದುವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ ಮತ್ತು ಕಳ್ಳರನ್ನು ಹಿಡಿಯುವ ಪ್ರಯತ್ನ ಮಾಡಿರುವುದಿಲ್ಲ.

ಆದ್ದರಿಂದ ತಾವುಗಳು ದೇಶದ ಸಂಪತ್ತು ಆದ ಶ್ರೀಗಂಧದ ಮರಗಳನ್ನು ಕಳ್ಳರು ಕದಿಯುತ್ತಿರುವುದರಿಂದ ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು, ಶ್ರೀಗಂಧದ ಮರಗಳ ಕಳ್ಳರನ್ನು ಹಿಡಿಯಲು ವಿಶೇಷ ತಂಡ ನೇಮಿಸಬೇಕೆಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾ‌ರ್ ಕೆ., ರಾಜ್ಯ ಉಪಾಧ್ಯಕ್ಷ ರಾಮಣ್ಣ ಮತ್ತಿತರ ರೈತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.    

- Advertisement -  - Advertisement - 
Share This Article
error: Content is protected !!
";