ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗಪಡಿಸಿಕೊಂಡು ನಾಡಿನ ಎಸ್.ಟಿ. ಸಮುದಾಯಕ್ಕೆ ದ್ರೋಹ ಎಸಗಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಂತಿಮ ದಿನಗಳು ಹತ್ತಿರ ಬಂದಿದೆ. ನಿಗಮದಲ್ಲಿ ನಡೆದ ಹಗರಣದ ಪಾರದರ್ಶಕ ತನಿಖೆಗಾಗಿ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದೆ ಎಂದು ಬಿಜೆಪಿ ತಿಳಿಸಿದೆ.
ಶೋಷಿತರ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಾಲ್ಮೀಕಿ ನಿಗಮ ಸ್ಥಾಪಿಸಿ ಅನುದಾನ ನೀಡಿದ್ದರು. ಆದರೆ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಬಳ್ಳಾರಿ ಲೋಕಸಭಾ ಚುನಾವಣೆಗೆ, ತೆಲಂಗಾಣ ಚುನಾವಣೆಗೆ ಬಳಸಿತ್ತು. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ SIT ತನಿಖೆ ರದ್ದು ಮಾಡಿ, ಸಿಬಿಐಗೆ ಕೇಸನ್ನು ಹೈಕೋರ್ಟ್ ವರ್ಗಾಯಿಸಿದೆ ಎಂದು ಬಿಜೆಪಿ ತಿಳಿಸಿದೆ.
ಸಿದ್ದರಾಮಯ್ಯನವರೇ, ಇನ್ನೂ ಯಾವ ಮುಖ ಇಟ್ಟುಕೊಂಡು ಸಿಎಂ ಕುರ್ಚಿಗೆ ಅಂಟಿಕೊಂಡಿದ್ದೀರಿ? ರಾಜ್ಯದ ತೆರಿಗೆದಾರರ ಹಣವನ್ನು ಹಗಲು ದರೋಡೆ ಮಾಡಿ ಪಕ್ಷದ ಚಟುವಟಿಕೆಗಳಿಗೆ ಬಳಸಿದ್ದ ನಿಮ್ಮ ತಂಡವನ್ನು ಪರಪ್ಪನ ಆಗ್ರಹಾರ ಸ್ವಾಗತಿಸುತ್ತಿದೆ.
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ಸಂಬಂಧ ನಡೆಯುತ್ತಿರುವ ಸಮೀಕ್ಷೆ ಸಂಪೂರ್ಣ ಬೋಗಸ್ ಎನ್ನುವುದಕ್ಕೆ ಮೇಲಿಂದ ಮೇಲೆ ಸಾಕ್ಷ್ಯ ಲಭಿಸುತ್ತಿದೆ.
ಸರ್ಕಾರ ನಿಯೋಜಿಸಿದ ಬಿಬಿಎಂಪಿ ಕಂದಾಯ ಅಧಿಕಾರಿಗಳು ಮನೆಗೆ ಭೇಟಿ ನೀಡದೆ, ಮನೆಯವರನ್ನು ವಿಚಾರಿಸದೆ ಹೊರಗಿನ ಗೋಡೆಗೆ ಸ್ಟಿಕ್ಕರ್ ಅಂಟಿಸಿ ಜಾತಿಗಣತಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಯಾವ ಪುರುಷಾರ್ಥಕ್ಕಾಗಿ ಈ ಸಮೀಕ್ಷೆ? ಎಂದು ಬಿಜೆಪಿ ಪ್ರಶ್ನಿಸಿದೆ.

