ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ತನಿಖಾ ಘಟಕಕ್ಕೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ. ಇದರೊಂದಿಗೆ ದೇಶದಲ್ಲಿಯೇ ಮೊತ್ತ ಮೊದಲ ಸೈಬರ್ ಕಮಾಂಡ್ ಸೆಂಟರ್ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಕೃತ್ಯಗಳ ವಿರುದ್ಧ ಹೊಸದಾಗಿ ಆರಂಭಗೊಂಡಿರುವ ತನಿಖಾ ಘಟಕ ಕಾರ್ಯಾಚರಣೆ ನಡೆಸಲಿದೆ. ಘಟಕದ ಡಿಐಜಿಯಾಗಿ ಭೂಷಣ್ ಬೊರಸೆ ಅವರನ್ನು ನೇಮಕ ಮಾಡಲಾಗಿದೆ. ಐಜಿಪಿ, ಎಸ್ಪಿ ಸೇರಿದಂತೆ ಇತರ ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಲು ಸರ್ಕಾರ ಉದ್ದೇಶಿಸಿದೆ. ಸೈಬರ್ ಕಮಾಂಡ್ ಹೊಣೆಗಾರಿಕೆಯನ್ನು ಪೊಲೀಸ್ ಮಹಾನಿರ್ದೇಶಕರ ಶ್ರೇಣಿಯ ಐಪಿಎಸ್ ಅಧಿಕಾರಿಗೆ ವಹಿಸಲಾಗುತ್ತದೆ. ಪ್ರಣಾವ್ ಮೊಹಾಂತಿ ಅವರಿಗೆ ಹೊಣೆಗಾರಿಕೆಯನ್ನು ನೀಡಲಾಗುತ್ತಿದ್ದು, ಈ ವಿಚಾರವಾಗಿ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.
ಏನಿದು ಸೈಬರ್ ಕಮಾಂಡ್ ಸೆಂಟರ್?
ಸೈಬರ್ ಭದ್ರತೆ, ಸೈಬರ್ ಅಪರಾಧ, ರಾನ್ಸಮ್‌ವೇರ್, ಹಿಂಬಾಲಿಸುವುದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್‌ಲೈನ್ ಅಪರಾಧಗಳು, ಸೆಕ್ಸ್‌ಟಾರ್ಷನ್, ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಗಳು, ಡೀಪ್‌ಫೇಕ್‌ಗಳು, ಐಡೆಂಟಿಟಿ ತೆಫ್ಟ್, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ತಪ್ಪು ಮಾಹಿತಿ ಇತ್ಯಾದಿಗಳ ವಿರುದ್ಧ ಸೈಬರ್ ಕಮಾಂಡ್ ಸೆಂಟರ್ ಕಾರ್ಯಾಚರಣೆ ನಡೆಸಲಿದೆ. ಈ ಮೊದಲು ಸೈಬರ್ ಕ್ರೈಂ ಮತ್ತು ನಾಕ್ರೊಟಿಕ್ಸ್ ವಿಭಾಗವು ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿತ್ತು.
ದೇಶದ ಮೊದಲ ಸೈಬರ್ ಪೊಲೀಸ್ ಠಾಣೆ ಆರಂಭಿಸಿದ್ದ ಕರ್ನಾಟಕ 2001 ರಲ್ಲಿ ಭಾರತದ ಮೊದಲ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಸ್ಥಾಪಿಸಿದ ಮೊದಲ ರಾಜ್ಯವಾಗಿಯೂ ಕರ್ನಾಟಕ ಗುರುತಿಸಿಕೊಂಡಿತ್ತು. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನಿಭಾಯಿಸಲು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಇದನ್ನು ಪ್ರಾರಂಭಿಸಲಾಗಿತ್ತು. ಆ ನಂತರ 2017 ರ ಮಾರ್ಚ್ನಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕ ಸೈಬರ್ ಅಪರಾಧ ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗಿತ್ತು.
ರಾಜ್ಯದಲ್ಲಿ ಸೈಬರ್ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚಾಗುತ್ತಿರುವ ಕಾರಣ ತನಿಖೆಗೆ ಪ್ರತ್ಯೇಕ ಘಟಕ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸಿದ್ದು, ಈಗ ಸೈಬರ್ ಕಮಾಂಡ್ ಸೆಂಟರ್ ಗೆ ಚಾಲನೆ ನೀಡಿದೆ. ಒಟ್ಟು 72 ಕೋಟಿ ರೂಪಾಯಿಯ ಅನುದಾನ ನೀಡುವಂತೆ ಪೊಲೀಸ್ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈಗ ಮೊದಲ ಹಂತದಲ್ಲಿ 5 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರ ಸಮ್ಮತಿಸಿದೆ ಎನ್ನಲಾಗಿದೆ.