ಚಂದ್ರವಳ್ಳಿ ನ್ಯೂಸ್, ತುಮಕೂರು:
ಇಲ್ಲಿನ ಸದಾಶಿವನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದ ಮೊದಲ ಏಕಾದಶಿ ಪ್ರಯುಕ್ತ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ವಿಶೇಷ ಪೂಜಾ ಅಲಂಕಾರ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಮಾತನಾಡಿ, ಪ್ರತಿ ವರ್ಷವೂ ಮೊದಲ ಏಕಾದಶಿಯಂದು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಅಲಂಕಾರದೊಂದಿಗೆ ಸ್ವಾಮಿಯನ್ನು ಭಕ್ತರ ಮನೆಗೆ ಕರೆದೊಯ್ದು ಹರಿಸೇವೆಯೊಂದಿಗೆ ಸ್ವಾಮಿಯನ್ನು ಗುಡಿ ತುಂಬಿಸಲಾಗುವುದು ಎಂದರು.
ಆಷಾಢ ಮಾಸದಲ್ಲಿ ಬರುವ ಪ್ರಥಮ ಏಕಾದಶಿಯು ತುಂಬಾ ವಿಶಿಷ್ಟವಾದಂತಹ ದಿನವಾಗಿದೆ. ಈ ದಿನ ಉಪವಾಸ ಮಾಡಿ ಪೂಜೆ ಸಲ್ಲಿಸುವುದರಿಂದ ಮಹಾ ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ.
ಹರಿಸೇವೆ ಮಾಡುವ ಸಂದರ್ಭದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣ ರೂಪದಲ್ಲಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯು ಹಿರಣ್ಯಕಶುಭುವನ್ನು ಸಂಹಾರ ಮಾಡಿದ ದಿನವಾಗಿದೆ ಎಂದು ಹೇಳಿದರು.
ಉತ್ಸವದಲ್ಲಿ ದೇವಸ್ಥಾನದ ಕಾರ್ಯಕರ್ತರಾದ ನರಸೇಗೌಡ, ಮಾದೇಗೌಡ, ಮಧುಸೂದನ್, ಅರ್ಚಕರಾದ ಅನಿಲ್‌ಕುಮಾರ್, ನವೀನ್‌ಕುಮಾರ್, ಬಡಾವಣೆಯ ಭಕ್ತರು ಭಾಗಿಯಾಗಿದ್ದರು.