ಮತಗಳ್ಳತನದಿಂದಲೇ ಮೊದಲ ಸಲ ಸೋತೆ-ಖರ್ಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2019ರಲ್ಲಿ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನದಿಂದಲೇ ನಾನು ಸೋತಿದ್ದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಫ್ರೀಡಂ ಪಾರ್ಕ್​ನಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಮತಗಳ್ಳತನದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಾನು ಜೀವನದಲ್ಲಿ ಸೋಲು ಕಂಡಿದ್ದೇ 2019ರ ಲೋಕಸಭೆ ಚುನಾವಣೆಯಲ್ಲಿ. 2019ನಲ್ಲಿ ಇದೇ ರೀತಿ ಮತಗಳ್ಳತನ ಮಾಡಿದ್ದಾರೆ. ಆದರೆ ಅದು ನಮಗೆ ಗೊತ್ತಾಗಿಲ್ಲ. ಸುಮಾರು 5 ಮತ ಕ್ಷೇತ್ರಗಳಲ್ಲಿ ನಕಲಿ ವೋಟ್ ಮಾಡಿ ನನ್ನನ್ನು ಸೋಲಿಸಿದ್ದಾರೆ ಎಂದು ಖರ್ಗೆ ದೂರಿದರು.

- Advertisement - 

ಮತಗಳ್ಳತನದ ವಿರುದ್ಧ ನಾವು ಎಲ್ಲಾ ರಾಜ್ಯಗಳಲ್ಲಿ ಇಂಥ ತಪ್ಪನ್ನು ಹುಡುಕಿ ತೆಗೆದು ಕೊಳ್ಳುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರಕ್ಕೆ ನೈತಿಕತೆ ಇಲ್ಲ. ನಕಲಿ ವೋಟಿಂಗ್​ ಮಾಡಿ ಮೋದಿ ದೇಶ ಆಳುತ್ತಿದ್ದಾರೆ. ಚುನಾವಣೆಗಳು ಆಗುತ್ತವೆ ಹೋಗುತ್ತವೆ. ಚುನಾವಣೆ ರಕ್ಷಣೆ ಮಾಡುವುದು ನಿಮ್ಮೆಲ್ಲರ ಕರ್ತವ್ಯ. ಪ್ರಧಾನಿ ಮೋದಿ ನಮ್ಮ ನಾಯಕರನ್ನು ಇಡಿ, ಸಿಬಿಐ ಮೂಲಕ ಹೆದರಿಸುತ್ತಿದ್ದಾರೆ. ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ ಮಾಡುತ್ತಿದ್ದಾರೆ. ಈಗಲೂ ಅದೇ ಚಾಳಿ ಮುಂದುವರಿದಿದ್ದು ಅವರಿಗೆ ಮತದಾರರು ಬುದ್ದಿ ಕಲಿಸಬೇಕು ಎಂದು ಖರ್ಗೆ ಕರೆ ನೀಡಿದರು.

ಕೇಂದ್ರ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ಮತಗಳ್ಳತನವನ್ನು ಹೊರಗೆ ಹಾಕಿ ಜನರಿಂದ ನಿಮಗೆ ಛೀಮಾರಿ ಹಾಕಿಸುತ್ತೇವೆ. ದೇಶದ ಆರ್ಥಿಕ ಸ್ಥಿತಿ ಕೆಡಿಸಿ ದೇಶ ಬರ್ಬಾದ್ ಮಾಡಿದ್ದಾರೆ. ಅವರು ಗೆದ್ದ ಕ್ಷೇತ್ರದಲ್ಲಿನ ಮತಕಳ್ಳತನವನ್ನು ಪತ್ತೆ ಹಚ್ಚಬೇಕು. ಬಿಜೆಪಿ ಇದೇ ರೀತಿ ಕಳ್ಳತನ ಮಾಡಿ ಅಧಿಕಾರದಲ್ಲಿ ಇರುತ್ತಾರೆ ಎಂದು ಆರೋಪಿಸಿದರು.

- Advertisement - 

ಕ್ವಿಟ್​ ಇಂಡಿಯಾ ರೂಪದಲ್ಲಿ ಕಾಂಗ್ರೆಸ್ ಹೋರಾಟ ಮಾಡಬೇಕಾಗಿದೆ. ಡೂ ಆರ್​ ಡೈ ಸ್ಲೋಗನ್​ ಜೊತೆ ಹೋರಾಟ ಮಾಡಿ ನಾವು ಮುಂದೆ ಸಾಗಬೇಕು. ಮತದಾನ ಕಸಿದ ಮೇಲೆ ನಮ್ಮ ಅಸ್ತಿತ್ವಾನೇ ಇರುವುದಿಲ್ಲ. ರಾಹುಲ್​ ಗಾಂಧಿ ಎಲ್ಲದಕ್ಕೂ ತಯಾರು. ಜೈಲಿಗೆ ಹೋಗಲು ತಯಾರು, ಹೋರಾಟ ಮಾಡಲು ತಯಾರು. ಅವರ ಮೇಲೆ 50 ಕೇಸುಗಳಿವೆ. ಆದರೆ, ಅವರು ಜನರ ಬಳಿ ಹೋಗಿ ಜನಜಾಗೃತಿ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ ಮತ ಕಳ್ಳತನ ಮಾಡಿ ಪ್ರಧಾನಿಯಾಗಿರುವ ಮೋದಿ ಕೂಡಲೇ ರಾಜೀನಾಮೆ ನೀಡಬೇಕು. ರಾಹುಲ್​ ಗಾಂಧಿ ಅವರು ಮತಗಳ್ಳತನದ ಬಗ್ಗೆ ಸಮಗ್ರ ಅಧ್ಯಯನ ಮಾಡಿ, ಸಾಕ್ಷ್ಯಾಧಾರ ಇಟ್ಟು ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನ ಜಾರಿ ಆದ ಮೇಲೆ ಒಬ್ಬ ವ್ಯಕ್ತಿಗೆ ಒಂದು ಓಟು. ಅದು ಬಡವನಾಗಿರಲಿ, ಶ್ರೀಮಂತರಾಗಿರಲಿ, ರಾಷ್ಟ್ರಪತಿಗೆ ಇರಲಿ, ಸಾಮಾನ್ಯ ವ್ಯಕ್ತಿಯೇ ಆಗಿರಲಿ ಇರುವುದು ಒಂದೇ ಓಟು. ಚುನಾವಣಾ ಆಯೋಗ ಸಂವಿಧಾನ ಬದ್ಧವಾಗಿ ನಡೆದುಕೊಂಡು ಹೋಗಬೇಕು. ಈ ಮತದ ಹಕ್ಕು ಸಂವಿಧಾನ ಕೊಟ್ಟಿರುವುದು. ಇದನ್ನು ಯಾರಿಂದಲೂ ಕಸಿಯಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು.

ಮನುವಾದಿಗಳು ಮತದ ಸ್ವರೂಪ, ಮೂಲಭೂತ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಎಲ್ಲ ಚುನಾವಣೆಗಳನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಮತಹಕ್ಕನ್ನು ಕಸಿಯುವ, ನಾಶ ಮಾಡುವ ಕೆಲಸ ಆಗಬಾರದು. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಇತ್ತು. ಆದರೆ, ಮಹದೇವಪುರ ಕ್ಷೇತ್ರಕ್ಕೆ ಬಂದಾಗ 1 ಲಕ್ಷ ಮತಗಳಿಂದ ಹಿನ್ನಡೆ ಆಯಿತು. ಬಿಜೆಪಿಯವರು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಅವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಇವಿಎಂ ದುರುಪಯೋಗ ಮಾಡಲಾಗುತ್ತಿದೆ. ಮತಗಳ್ಳತನ ಮಾಡಿಸಲಾಗುತ್ತಿದೆ. ಇದು ಇಡೀ ದೇಶದಲ್ಲಿ ನಡೆದ ಅಕ್ರಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಬಹುಮತ ಪಡೆದಿಲ್ಲ. ಹಾಗಾಗಿ ಅವರಿಗೆ ಅಧಿಕಾರದಲ್ಲಿರಲು ನೈತಿಕ ಹಕ್ಕಿಲ್ಲ. ಅವರು ಕೂಡಲೇ ರಾಜೀನಾಮೆ ಕೊಡಬೇಕು. ಮತ್ತೆ ಚುನಾವಣೆ ಎದುರಿಸಿ, ನ್ಯಾಯ ಬದ್ಧವಾಗಿ ಗೆದ್ದು ಬರಬೇಕು. ಬಿಜೆಪಿಯ ಬ್ರಾಂಚ್ ಆಫೀಸ್ ಆಗಿ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಇಡೀ ದೇಶ ರಾಹುಲ್ ಗಾಂಧಿ ನಾಯಕತ್ವಬೇಕು ಅನ್ನುತ್ತಿದೆ. ಹೀಗಾಗಿ ನಾವು ಅವರ ಹಿಂದೆ ಇದ್ದೇವೆ. ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 14 ಸೀಟುಗಳನ್ನು ಗೆಲ್ಲಬೇಕಿತ್ತು. ಆದರೆ ಮತಗಳ್ಳತನದ ಕಾರಣದಿಂದ ನಾವು ಸೋತಿದ್ದೇವೆ. ಇವಿಎಂ ಬಂದ ಮೇಲೆ ಇವನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸ ಆಗುತ್ತಿರುವುದು ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ. ರಾಹುಲ್ ಗಾಂಧಿಯಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ಚಳವಳಿ ಆರಂಭವಾಗಿದೆ. ಇದಕ್ಕೆ ಇಡೀ ರಾಜ್ಯದ ಜನತೆ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದರು.

ಚುನಾವಣಾ ಆಯೋಗ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಕೊಟ್ಟಿದ್ದು, ಮತದಾನ ನಮ್ಮ ಮೂಲಭೂತ ಹಕ್ಕು, ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

Share This Article
error: Content is protected !!
";