ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯ ಸರ್ಕಾರ ಬಡವರ ಹೊಟ್ಟೆ ತುಂಬಿಸಲು ನ್ಯಾಯ ಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ವಿತರಣೆ ಮಾಡುತ್ತಿರುವ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಮಾಧ್ಯಮಗಳ ಮೂಲಕ ಸರ್ಕಾರದ ಗಮನ ಸೆಳೆದಿರುವ ನನ್ನ ಮೇಲೆ ಕ್ರಿಮಿನಲ್ ಹಿನ್ನೆಲೆಯಿದೆ ಎಂದು ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿರುವ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಮಧುಸೂದನ್ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸಮಾಜ ಸೇವಕ ಟಿ.ಶಫಿವುಲ್ಲಾ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ನನ್ನ ಮೇಲೆ ಮಾಡಿರುವ ಕ್ರಿಮಿನಲ್ ಪ್ರಕರಣ ಸಂಖ್ಯೆ ೨೧೨/೨೦೧೮ ರ ಚಾರ್ಜ್ಶೀಟನ್ನೆ ಅಂತಿಮ ತೀರ್ಪೆಂದು ಬಿಂಬಿಸಿ ಮಾನಸಿಕವಾಗಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ೩೦-೪೦ ವರ್ಷಗಳಿಂದಲು ಸಮಾಜ ಸೇವೆಯಲ್ಲಿ ತೊಡಗಿರುವ ನಾನು ಭದ್ರಾಮೇಲ್ದಂಡೆ ಹಾಗು ರೈಲ್ವೆ ಹೋರಾಟ ಸಮಿತಿಗಳಲ್ಲಿ ಸದಸ್ಯನಾಗಿ ಎಲ್ಲಾ ಹೋರಾಟಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದೇನೆ.
ಆಹಾರ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಮಧುಸೂದನ್ ಮೇಲೆ ಮೇಲಾಧಿಕಾರಿಗಳ ಪ್ರಾಧಿಕಾರಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ನನ್ನ ವಿರುದ್ದ ಗುರುತರವಾದ ಆರೋಪಗಳನ್ನು ಹೊರಿಸಿದಕ್ಕೆ ದಾಖಲೆಗಳನ್ನು ನೀಡಬೇಕೆ ವಿನಃ ಅಪ ಪ್ರಚಾರದಲ್ಲಿ ತೊಡಗಿರುವುದು ಯಾವ ನ್ಯಾಯ? ಅದಕ್ಕಾಗಿ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಟಿ.ಶಫಿವುಲ್ಲಾ ಜಿಲ್ಲಾ ರಕ್ಷಣಾಧಿಕಾರಿಯವರಿಗೆ ನೀಡಿರುವ ದೂರಿನಲ್ಲಿ ವಿನಂತಿಸಿದ್ದಾರೆ.

