ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನದಾತರ ದೆಹಲಿ ಚಲೋ ಚಳುವಳಿ ಮತ್ತೆ ಪ್ರಾರಂಭವಾಗಿದೆ. ಪ್ರಧಾನಿಗಳ ಎದೆಯಲ್ಲಿ ನಡುಕ ಹುಟ್ಟಿದೆ! ಎಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೀಕಿಸಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಚಲೋ ಘೋಷಿಸಿದ್ದು, ನೋಯ್ಡಾದ ದಲಿತ ಪ್ರೇರಣಾ ಸ್ಥಳದ ಬಳಿ ಪೊಲೀಸ್ ತಡೆಗೋಡೆಗಳನ್ನು ಮುರಿದು ಕಡೆಗೆ ರಾಷ್ಟ್ರ ರಾಜಧಾನಿಯತ್ತ ಸಾಗಿದರು.
ಭಾರತೀಯ ಕಿಸಾನ್ ಪರಿಷತ್, ಕಿಸಾನ್ ಮಜ್ದೂರ್ ಮೋರ್ಚಾ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಇತರ ರೈತ ಸಂಘಟನೆಗಳು ಮಂಗಳವಾರ ದೆಹಲಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದವು.
ಈ ಬಾರಿಯೂ ರೈತರ ಆಕ್ರೋಶವನ್ನು ತಡೆಯುವ, ಅವರನ್ನು ದೆಹಲಿಗೆ ತಲುಪದಂತೆ ಮಾಡುವ ರೈತದ್ರೋಹಿ ಕೆಲಸಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರೈತಪರ ಸಂಘಟನೆಗಳು ಆರೋಪಿಸಿವೆ.
ಜಿಎಸ್‌ಟಿ ಹೊರಿಸಿ, ಕನಿಷ್ಟ ಬೆಂಬಲ ಬೆಲೆಯನ್ನೂ ನೀಡದೆ, ಯಾವ ಬೇಡಿಕೆಗಳನ್ನೂ ಈಡೇರಿಸದೆ ಅನ್ಯಾಯ ಎಸಗುತ್ತಿರುವ ನಿರ್ಧಯಿ, ಸರ್ವಾಧಿಕಾರಿ ಮೋದಿ ಸರ್ಕಾರ ಈಗಲಾದರೂ ರೈತರ ಬೇಡಿಕೆಗಳಿಗೆ ಸ್ಪಂದಿಸಲಿ ಎಂದು ರೈತರು ತಾಕೀತು ಮಾಡಿದ್ದಾರೆ.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳು ರೈತರನ್ನು ಮತ್ತೆ ದೆಹಲಿಗೆ ಬರುವಂತೆ ಮಾಡಿವೆ. ಮೋದಿ ಸರ್ಕಾರ ರೈತರ ಸಂಕಷ್ಟ ಆಲಿಸುವ ಬದಲು, ಅನ್ನದಾತರು ದೆಹಲಿಗೆ ಬರದಂತೆ ತಡೆಯಲು ರಸ್ತೆಗೆ ಬ್ಯಾರಿಕೇಡ್, ಮೊಳೆ ಹಾಕುವ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರ ಪ್ರತಿಭಟನೆ ತಡೆಯುವ ಬದಲು ರೈತರೊಂದಿಗೆ ಮಾತನಾಡಿ, ಅವರ ಸಮಸ್ಯೆ ಅರಿತು ಪರಿಹಾರ ಒದಗಿಸಲಿ ಎಂದು ಹೋರಾಟಗಾರರು ತಾಕೀತು ಮಾಡಿದ್ದಾರೆ.
ರೈತ ನಾಯಕ ಸುಖ್ಬೀರ್ ಖಲೀಫಾ ನೇತೃತ್ವದಲ್ಲಿ ನೊಯ್ಡಾದ ಮಹಾ ಮಾಯಾ ಮೇಲ್ಸೇತುವೆಯ ಕೆಳಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿತು. ರೈತರು ಐದು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಹಳೆ ಸ್ವಾಧೀನ ಕಾನೂನಿನಡಿಯಲ್ಲಿ ಶೇ, 10 ರಷ್ಟು ನಿವೇಶನ ಹಂಚಿಕೆ ಮತ್ತು ಶೇ. 64.7 ರಷ್ಟು ಪರಿಹಾರ, ಮಾರುಕಟ್ಟೆ ದರದ ನಾಲ್ಕು ಪಟ್ಟು ಪರಿಹಾರ ಮತ್ತು 2014ರ ಜನವರಿ 1, 2014 ರ ನಂತರ ಭೂ ರಹಿತರ ಮಕ್ಕಳಿಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ 20 ರಷ್ಟು ನಿವೇಶನಗಳನ್ನು ನೀಡಬೇಕು.
ರೈತರಿಗೆ ಉದ್ಯೋಗ ಮತ್ತು ಪುನರ್ವಸತಿ ಪ್ರಯೋಜನಗಳನ್ನು ನೀಡಬೇಕು, ಹೈಪವರ್ ಸಮಿತಿಯು ಅಂಗೀಕರಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರಿ ಆದೇಶಗಳನ್ನು ನೀಡಬೇಕು ಮತ್ತು ಜನವಸತಿ ಪ್ರದೇಶಗಳ ಸರಿಯಾದ ಇತ್ಯರ್ಥವನ್ನು ಮಾಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ದೆಹಲಿಯತ್ತ ತೆರಳಲು ಸಿದ್ಧರಿದ್ದೇವೆ. ಮಹಾ ಮಾಯಾ ಫ್ಲೈ ಓವರ್ (ನೋಯ್ಡಾದಲ್ಲಿ) ನಿಂದ ದೆಹಲಿ ಕಡೆಗೆ ನಮ್ಮ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ನಾವೆಲ್ಲರೂ ದೆಹಲಿ ತಲುಪುತ್ತೇವೆ ಎಂದು ಹೇಳಿದ್ದಾರೆ.
ರೈತರು ದೆಹಲಿ ಚಲೋ ಚಳವಳಿ ನಡೆಸುತ್ತಿರುವ ಪರಿಣಾಮ ನೊಯ್ಡಾದ ಜಿಲ್ಲಾ ಗಡಿಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರೈತರು ಕಳೆದ ಫೆಬ್ರವರಿ 13ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ಎಸ್‌ಕೆಎಂ(ರಾಜಕೀಯೇತರ) ಮತ್ತು ಕೆಎಂಎಂ ನೇತೃತ್ವದಲ್ಲಿ ಸಂಸತ್ ಸಂಕೀರ್ಣದ ಕಡೆಗೆ ರೈತರು ದೆಹಲಿ ಚಲೋ ನಡೆಸಲು ಆರಂಭಿಸಿದ್ದಾರೆ.