ಲಂಚ ಕೊಡದಕ್ಕೆ ಶ್ರೀಗಂಧ ಮರ ಬೆಳೆದ ರೈತರ ಮೇಲೆ ಕಳವು ಪ್ರಕರಣ ಹಾಕಿದ ಅರಣ್ಯಾಧಿಕಾರಿಗಳು

News Desk

ಲಂಚ ಕೊಡದಕ್ಕೆ ಶ್ರೀಗಂಧ ಮರ ಬೆಳೆದ ರೈತರ ಮೇಲೆ ಕಳವು ಪ್ರಕರಣ ಹಾಕಿದ ಅರಣ್ಯಾಧಿಕಾರಿಗಳು
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಚಂದ್ರಪ್ಪ ಎಂಬುವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿರುವ ದೌರ್ಜನ್ಯ ಮತ್ತು ಭ್ರಷ್ಟಾಚಾರ ಹಾಗೂ ಅಕ್ರಮಗಳ ಕುರಿತು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಕೆ.ಅಮರ ನಾರಾಯಣ ಅರಣ್ಯ ಸಚಿವರನ್ನು ಒತ್ತಾಯಿಸಿದ್ದಾರೆ.

ಸಂಘದ ಮುಖ್ಯ ಧ್ಯೇಯ ಮತ್ತು ಉದ್ದೇಶಗಳು ರೈತರನ್ನು ಹೆಚ್ಚು ಹೆಚ್ಚಾಗಿ ಶ್ರೀಗಂಧ ಮತ್ತು ವಿವಿಧ ಪ್ರಭೇದದ ವೃಕ್ಷಗಳನ್ನು ಬೆಳೆಸುವ ಮೂಲಕ ಅರಣ್ಯದ ಹೊರಗೆ ಹಸಿರು ಹೊದಿಕೆಯನ್ನು ಹಾಕುವ ರೈತರನ್ನು ಪ್ರೇರೇಪಿಸುತ್ತಿದೆ. ಇದರ ಜೊತೆಗೆ ಕೃಷಿಕರು ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ಸಂಘವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹೊಳೆನರಸೀಪುರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ನಿವೃತ್ತ ಶಿಕ್ಷಕ ಬಿ ಚಂದ್ರಪ್ಪನವರು ಉತ್ಕೃಷ್ಟವಾದ ಸೇವೆ ಸಂದಿರುವ ನಿವೃತ್ತ ಶಿಕ್ಷಕರು. ಅವರಿಗೆ ಅತ್ತ್ಯುತ್ತಮ ಶಿಕ್ಷಕ ಎಂಬ ಪ್ರಶಸ್ತಿಯೂ ದೊರೆತಿದೆ. ಅವರಿಗೆ ೭೯ ವರ್ಷ ವಯಸ್ಸು. ವೃತ್ತಿಯಲ್ಲಿ ಕೃಷಿಕರಾಗಿರುತ್ತಾರೆ. ಶ್ರೀಯುತರು ಇಂತಹ ಸಂಧ್ಯಾ ಕಾಲದಲ್ಲಿ ಎದುರಿಸಿರುವ ಕಷ್ಟ ಕಾರ್ಪಣ್ಯಗಳನ್ನು ವಿವರಿಸಲು ಪದಗಳೇ ಸಾಲುತ್ತಿಲ್ಲವಾಗಿದೆ ಎಂದು ತಿಳಿಸಿದ್ದಾರೆ.
ಶ್ರೀಗಂಧ ಬೆಳೆದ ತಪ್ಪಿಗೆ ಓರ್ವ ನಿವೃತ್ತ ಶಿಕ್ಷಕ ಹಾಗೂ ರೈತ ಎದುರಿಸಬೇಕಾದ ಅಮಾನವೀಯ ಹಾಗೂ ಹೀನಾಯ ಪರಿಸ್ಥಿತಿಯ ಬಗ್ಗೆ ಇಡೀ ಮಾನವ ಸಮೂಹ ತಲೆ ತಗ್ಗಿಸುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ದರ್ಪ ಮತ್ತು ದೌರ್ಜನ್ಯ ಮನೋಭಾವನೆ ಎಂದು ತಿಳಿಯಬಹುದಾಗಿದೆ. ಈಗಾಗಲೇ ರೈತರ ವಿರುದ್ದ ಅನೇಕ ಪ್ರಕರಣಗಳಲ್ಲಿ ಅಮಾನುಷವಾದ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ತೊಡಗಿದ್ದು, ಈ ಪ್ರಕರಣದ ಮೂಲಕ ಮತ್ತೊಂದು ಅಕ್ರಮ ಮತ್ತು ಅಪರಾಧ ಎಸಗಿ ರೈತರ ಶೋಷಣೆ ಮಾಡಿರುವುದು ಖಂಡನೀಯವಾಗಿದೆ.

ರೈತರಿಗೆ ಹಣಕ್ಕಿಂತ ಮಾನವೇ ಪ್ರಮುಖವಾದುದು. ಅದಕ್ಕೆ ತಿಲಾಂಜಲಿ ಇಟ್ಟಿರುವ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕ್ರೌರ್ಯದ ಕಾರ್ಯಾಚರಣೆ ಖಂಡನೀಯವೆಂದು ಸಂಘದ ಸಮಸ್ತ ರೈತರ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ. ವಯೋವೃದ್ಧರನ್ನು ದಿಗ್ಬಂಧನದಲ್ಲಿರಿಸಿ, ಎಫ್ಐಆರ್ ದಾಖಲಿಸಿ, ಮರ್ಮಾಘಾತ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ ಖಂಡನೀಯವೆಂದು ಸಂಘದ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಇಲಾಖೆಯ ಅಧಿಕಾರಿಗಳು ಎಸಗಿರುವುದು ಅಕ್ಷಮ್ಯ ಅಪರಾಧವೆಂದು ಸಂಘವು ಖಂಡಿಸಿದೆ.
ಅರಣ್ಯ ಇಲಾಖೆಯ ಕಚೇರಿಗಳಿಗೆ ಶ್ರೀಗಂಧ ಮರಗಳ ಕಟಾವಣೆ ಮಾಡಲು ಅನುಮತಿಗಾಗಿ ಅಲೆದೂ ಅಲೆದೂ ಸಾಕಾಗಿ, ಅವರು ಕಷ್ಟಪಟ್ಟು ಬೆಳೆದಿರುವ ಶ್ರೀಗಂಧದ ಮರಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಪೂರ್ವಾನುಮತಿಗಾಗಿ ಅನೇಕ ಪತ್ರಗಳನ್ನು ಬರೆದೂ ಬರೆದೂ ಸುಸ್ತಾಗಿ, ಕೊನೆಗೆ ಅಳಿದುಳಿದಿರುವ ಶ್ರೀಗಂಧದ ಮರಗಳನ್ನು ಕಳ್ಳರಿಂದ ಉಳಿಸಿಕೊಳ್ಳಲು, ಅರಣ್ಯ ಇಲಾಖೆಗೆ ಲಿಖಿತವಾಗಿ ತಿಳಿಸಿ, ಅವರ ಸಲಹೆಯಂತೆ ಸ್ವಂತ ಜಮೀನಿನಲ್ಲಿರುವ ಶ್ರೀಗಂಧದ ಮರಗಳನ್ನು ಮತ್ತು ಬೇರುಗಳನ್ನು ಇಲಾಖೆಗೆ ಮಾಹಿತಿ ನೀಡಿ, ಕತ್ತರಿಸಿ ಅವರ ಮನೆಯಲ್ಲಿ ಇಟ್ಟಿಕೊಂಡಿದ್ದಕ್ಕಾಗಿ ಅವರ ವಿರುದ್ದ ಅರಣ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿರುವುದು ನಿಜಕ್ಕೂ ಅಮಾನವೀಯ, ಅಕ್ರಮ ಮತ್ತು ನಾಗರಿಕ ಸಮಾಜ ಖಂಡಿಸುವಂತಹ ಘಟನೆಯಾಗಿದೆ ಎಂದು ಅಮರನಾರಾಯಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯ ವೈಫಲ್ಯವನ್ನು ಮುಚ್ಚಿಕೊಳ್ಳಲು ಶ್ರೀಗಂಧ ಮರಗಳ ಕಟಾವಣೆಗಾಗಿ ರೈತರು ೨ ಲಕ್ಷ ರೂ. ಲಂಚ ನೀಡಲಿಲ್ಲವೆಂಬ ಕಾರಣಕ್ಕಾಗಿ, ಸುಳ್ಳು ಪ್ರಕರಣ ದಾಖಲಿಸಿ ಧಾರ್ಷ್ಟ್ಯ ಮೆರೆದಿರುವ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕೆಂದು ಸಂಘವು ಆಗ್ರಹಿಸಿದೆ.
ರೈತರೆಂದರೆ ಅರಣ್ಯ ಇಲಾಖೆಯ ಅಧಿಕಾರಿಗಳ ಕಾಲ ಕಸವೇ? ಈ ಇಲಾಖೆಯ ಗುಲಾಮರೇ? ರೈತರೇನು ಇನ್ನೂ ಬ್ರಿಟಿಷರ ಆಳ್ವಿಕೆಯಲ್ಲಿರುವವರೇ? ಈ ರೀತಿಯಾಗಿ ದಬ್ಬಾಳಿಕೆ ಮಾಡಲು ಸರ್ಕಾರವೇನಾದರೂ ಅಧಿಕಾರ ನೀಡಿದೆಯೇ? ಎಂದು ಸಂಬಂಧಿಸಿದ ಅರಣ್ಯ ಸಚಿವರು ಮತ್ತು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಸಂಘ ಆಗ್ರಹ ಮಾಡಿದೆ.
ಸದರಿ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕೆಂದು ರೈತರ ಒಕ್ಕೊರಲಿನ ಆಗ್ರಹವಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ರೈತರ ಜಮೀನಿನಲ್ಲಿ ಬೆಳೆದಿರುವ ಯಾವುದೇ ಬೆಳೆಗೆ ಯಾವುದೇ ಇಲಾಖೆಯ ಅದರಲ್ಲೂ ಅರಣ್ಯ ಇಲಾಖೆಯ ಪೂರ್ವಾನುಮತಿಯ ಅಗತ್ಯವಿಲ್ಲವೆಂಬ ಆದೇಶ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಸಂಘವು ಆಗ್ರಹಿಸಿದೆ.

ಶ್ರೀಗಂಧ ಮರಗಳ ಕಳ್ಳರನ್ನು ಹಿಡಿಯಲು ಕೈಲಾಗದ ಅರಣ್ಯ ಇಲಾಖೆ-
ರೈತರ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಮರಗಳ ನಿಜವಾದ ಕಳ್ಳರನ್ನು ಮತ್ತು ಕಳ್ಳ ಮಾಲನ್ನು ಪಡೆಯುತ್ತಿರುವವರನ್ನು ನಿಗ್ರಹಿಸದೇ, ಅರಣ್ಯ ಇಲಾಖೆ ಅಧಿಕಾರಿಗಳು, ನೈಜ, ಮುಗ್ದ ಮತ್ತು ಪ್ರಾಮಾಣಿಕ ರೈತರ ಮೇಲೆ ದೌರ್ಜನ್ಯ ನಡೆಸಲು ಸರ್ಕಾರ ಅನುಮತಿ ನೀಡಿದೆಯೇ ಎಂಬುದನ್ನು ತಿಳಿಸಬೇಕೆಂದಿದ್ದಾರೆ. ಅರಣ್ಯ ಇಲಾಖೆಯು ಅನಗತ್ಯವಾಗಿ ಪೀಡಿಸಲೆಂದೇ ಮತ್ತು ರೈತರನ್ನು ಸಿಕ್ಕಿಸಲೆಂದೇ ಘನ ಘೋರವಾದ ಬ್ರಿಟಿಷರ ಕಾಲದ ಕಾನೂನುಗಳನ್ನು ರೈತರ ಮೇಲೆ ವಿಧಿಸಿರುವುದನ್ನು ರದ್ದು ಪಡಿಸಬೇಕೆಂದು ಸಂಘವು ಒತ್ತಾಯಿಸುತ್ತದೆ.

ಚಂದ್ರಪ್ಪನವರ ಮಾನ ಮೂರಾ ಬಟ್ಟೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆಗೆ ಉಗ್ರ ಶಿಕ್ಷೆಯೇ ಆಗಬೇಕೆಂದು ರೈತರ ಆಗ್ರಹವಾಗಿದೆ.
ಕೇವಲ ಹಣದಾಸೆಗೆ, ಭ್ರಷ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಕಾನೂನನ್ನು ದುರುಪಯೋಗಪಡಿಸಿಕೊಂಡಿರುವ ಈ ಘಟನೆಗೆ ಅರಣ್ಯ ಸಚಿವರಾಗಿ , ನಿಮ್ಮ ಕೊಡುಗೆಯೂ ಇದೆಯೆಂದು ರೈತರ ಅಭಿಪ್ರಾಯವಾಗಿರುತ್ತದೆ, ಆದುದರಿಂದ ಇಂತಹ ಕಳಂಕದಿಂದ ಹೊರಬರಲು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ, ಈ ರಾಜ್ಯದ ಸ್ವಾಭಿಮಾನಿ ರೈತರಿಗೆ ಗೌರವ ಮತ್ತು ರಕ್ಷಣೆ ಇದೆ ಎಂಬ ಸಂದೇಶವನ್ನು ರಾಜ್ಯ ಸರ್ಕಾರ ರವಾನಿಸಬೇಕೆಂದೂ, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನಲ್ಲಿ ವರ್ತಿಸುವಂತೆ, ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳ ಮೇಲೆ ಹಸ್ತಕ್ಷೇಪ ಮಾಡಬಾರದೆಂಬ ಸಂಘ ಆಗ್ರಹಿಸಿದೆ.

ಹೆಜ್ಜೆ ಹೆಜ್ಜೆಗೂ ಸುಲಿದು ತಿನ್ನುವ ಬಕಾಸುರರಂತಿರುವ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ನಿಗ್ರಹಿಸಲು, ಅರಣ್ಯ ಸಚಿವರಾಗಿ, ಅರಣ್ಯ ಇಲಾಖೆಯಲ್ಲಿ ಹಾಸು ಹೊಕ್ಕಾಗಿರುವ ಭ್ರಷ್ಟಾಚಾರವೆಂಬ ಅನಿಷ್ಟವನ್ನು ತೊಡೆದುಹಾಕಲು, ನಿಮಗೆ ರೈತರ ಬಗ್ಗೆ ಅಭಿಮಾನವಿದ್ದರೆ, ಧೈರ್ಯ ಹಾಗೂ ತಾಕತ್ತು ಇದ್ದರೆ, ಲಂಚ ಕೇಳುವ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಉಗ್ರ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಒಂದು ವಾಟ್ಸಪ್ಪ್ ನಂಬರ್ ಮೂಲಕ ದೂರು ದಾಖಲಿಸುವ ವ್ಯವಸ್ಥೆ ಮಾಡಬೇಕೆಂದು, ದೂರು ಬಂದ ಕೂಡಲೇ ಅಂತಹ ಅಧಿಕಾರಿ / ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗುವುದೆಂದು ಸಂದೇಶ ನೀಡಬೇಕೆಂದು ಸಂಘವು ಒತ್ತಾಯಿಸುತ್ತದೆ. ಈ ಕುರಿತು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಸಚಿವರು ಕೈಗೊಂಡ ಕ್ರಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಪತ್ರಿಕಾ ಹೇಳಿಕೆ ನೀಡಬೇಕೆಂದು ಸಂಘ ವಿನಂತಿಸಿದೆ.

ಅರಣ್ಯ ಸಿಬ್ಬಂದಿಯ ಲಂಚಕೋರತನಕ್ಕೆ ಮತ್ತೊಂದು ಕಾರಣವೇನೆಂದರೆ, ವರ್ಗಾವಣೆ ವಿಷಯದಲ್ಲಿ ನಡೆಯುತ್ತಿರುವ ವ್ಯಾಪಕವಾದ ಭ್ರಷ್ಟಾಚಾರವೆಂದು ತಿಳಿದುಬಂದಿದೆ. ಅರಣ್ಯ ಇಲಾಖೆಯ ಸಚಿವರಾಗಿ ನಿಮಗೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಲ್ಲಿ ನಂಬಿಕೆ ಇದ್ದರೆ, ಅರಣ್ಯ ಇಲಾಖೆಯ ಎಲ್ಲಾ ಸ್ತರಗಳಲ್ಲಿ ಸಮಾಲೋಚನೆ (ಕೌಸ್ಲಿಂಗ್) ಮುಖಾಂತರ ವರ್ಗಾವಣೆ ನೀತಿಯನ್ನು ಜಾರಿಗೆ ತರುವಂತೆ ಸಂಘವು ಆಗ್ರಹಿಸಿದೆ. ಆಗ ಸಚಿವರನ್ನು ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಅಥವಾ ಅಪ್ರಾಮಾಣಿಕ ಎಂಬ ಶಂಕೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಬ್ರಹ್ಮಾಂಡ ಭ್ರಷ್ಟಾಚಾರದ ಕರಿನೆರಳಿನಲ್ಲಿ ನರಳುತ್ತಿರುವ ಅರಣ್ಯ ಇಲಾಖೆಗೆ ಕಾಯಕಲ್ಪ ಮಾಡಿದಂತಾಗುತ್ತದೆ. ನೀವು ಓರ್ವ ಪ್ರಾಮಾಣಿಕ ಮತ್ತು ದಕ್ಷ ಅರಣ್ಯ ಸಚಿವರಾಗಿ ಈ ನೀತಿಯನ್ನು ಕೂಡಲೇ ಜಾರಿಗೆ ತಂದು ಕೃತಾರ್ಥರಾಗುವಿರೆಂದು ಸಂಘ ಆಶಯ ಹೊಂದಿರುತ್ತದೆಂದು ಸುದೀರ್ಘವಾದ ಪತ್ರದಲ್ಲಿ ತಿಳಿಸಿರುತ್ತಾರೆ. ಅರಣ್ಯ
ಸಚಿವರು ಮತ್ತು ಸರ್ಕಾರ ದಿಟ್ಟ ಕ್ರಮಗಳನ್ನು ತೆಗೆದುಕೊಂಡರೆ ಆಡಳಿತದಲ್ಲಿ ದಕ್ಷತೆ ಹೆಚ್ಚಿ ಉತ್ತಮ ವಾತಾವರಣ ನಿರ್ಮಾಣವಾಗಿ ನಿರ್ಭೀತಿಯಿಂದ ರೈತರು ಜೀವನ ಸಾಗಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ರೈತರ ಹೆಸರಿನಲ್ಲಿ ಹಣ ಮುಕ್ಕುವುದಕ್ಕೂ ಕಡಿವಾಣ ಬೀಳುತ್ತದೆ ಮತ್ತು ಪಾರದರ್ಶಕತೆ ಮುಂಚೂಣಿಗೆ ಬರುತ್ತದೆಂದು ರೈತರ ಅಭಿಪ್ರಾಯವಾಗಿರುತ್ತದೆ. ಈ ಅಭಿಪ್ರಾಯಕ್ಕೆ ಇಂಬು ನೀಡಿ ರಾಜ್ಯದ ಘನತೆ ಮತ್ತು ಗೌರವ ಉಳಿಸಬೇಕೆಂದು ಸಂಘ ಸವಿನಯವಾಗಿ ಪ್ರಾರ್ಥಿಸಿದೆ.
ಕೃಷಿ ಭೂಮಿಯ ಮೇಲೆ ಬೆಳೆದ ಶ್ರೀಗಂಧದ ಮರ ಅರಣ್ಯ ಉತ್ಪನ್ನವಲ್ಲ. ಇದು ರೈತನ ಜೀವನಕ್ಕಾಗಿ ಮಿಶ್ರ ತೋಟಗಾರಿಕೆಯಲ್ಲಿ ಬೆಳೆದ ವಾಣಿಜ್ಯ ಬೆಳೆ.

ಇದೊಂದು ಪ್ರೋತ್ಸಾಹಕ ಕಾರ್ಯಕ್ರಮದಡಿ ರೈತರನ್ನು ಉತ್ತೇಜಿಸಲು ರೂಪಿಸಿದ ಕಾರ್ಯಕ್ರಮ. ರೈತರು ಬೆಳೆದ ಮರ ರೈತರಿಗೆ ಸೇರಿದ್ದು ಎಂದು ಪುಂಖಾನುಪುಂಖವಾಗಿ ಪ್ರಚಾರ ಮಾಡಿ, ಈಗ ನಿಷ್ಠಾವಂತ ರೈತನನ್ನು ಕಳ್ಳನಂತೆ ಬಿಂಬಿಸಿರುವುದು ಅಮಾನವೀಯ ಕೃತ್ಯ ಹಾಗೂ ರೈತನ ಮೇಲೆ ಎಸಗಿರುವ ಘೋರವಾದ ದೌರ್ಜನ್ಯವೆಂದು ರೈತರು ಅಭಿಪ್ರಾಯ ಪಟ್ಟಿರುತ್ತಾರೆ. ಒಂದೆಡೆ ಶ್ರೀಗಂಧ ಬೆಳೆದು ಸಿರಿವಂತರಾಗಿ ಎಂದು ಪುಂಗಿ ಊದುತ್ತಾ, ಮತ್ತೊಂದೆಡೆ ಮುಕ್ತ ಮಾರುಕಟ್ಟೆಯಲ್ಲಿ ಶ್ರೀಗಂಧದ ವಹಿವಾಟು ಮಾಡಬಹುದೆಂದು ಆದೇಶ ಮಾಡಿ, ರೈತ ತಾನು ಬೆಳೆದ ಶ್ರೀಗಂಧ ಮರ ಕತ್ತರಿಸಲು ಅರಣ್ಯ ಇಲಾಖೆಯ (ದೊಣ್ಣೆ ನಾಯಕನ) ಅಪ್ಪಣೆ ಏಕೆ ಬೇಕೆಂದು ಹಲವಾರು ಭಾರಿ ಸಂಘವು ಪ್ರಶ್ನಿಸಿದ್ದು, ಅದಕ್ಕೆ ಇಂದಿಗೂ ಉತ್ತರಿಸದೇ, ಶೋಷಣೆ ಮಾಡುತ್ತಿರುವ ಇಲಾಖೆಯ ಧೋರಣೆ ಖಂಡನೀಯ ಎಂದು ಸಂಘವು ಅಭಿಪ್ರಾಯಪಡುತ್ತದೆ. ಆದುದರಿಂದ ಶ್ರೀಗಂಧ ಬೆಳೆ ಮೇಲೆ ವಿಧಿಸಿರುವ ಎಲ್ಲಾ ನಿರ್ಬಂಧಗಳನ್ನು ತತಕ್ಷಣದಿಂದ ಹಿಂಪಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ.

ಓಬಿರಾಯನ ಕಾಲದ ಅರಣ್ಯ ಕಾನೂನುಗಳನ್ನು ವಿಧಿಸಿ, ರೈತರನ್ನು ನಿರಂತರವಾಗಿ ಶೋಷಣೆ ಮಾಡುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿ/ ಸಿಬ್ಬಂದಿಯ ಕಪಿಮುಷ್ಠಿಯಿಂದ ರೈತರನ್ನು ಬಿಡುಗಡೆ ಮಾಡಬೇಕೆಂದು ಸಂಘ ಪ್ರತಿಪಾದಿಸಿದೆ. ಶ್ರೀಗಂಧ ಬೆಳೆಗಾರರ ಸಮಸ್ಯೆಗಳನ್ನು ನಿವಾರಣೆ ಮಾಡುವುದಾಗಿ ಅರಣ್ಯ ಸಚಿವರಾಗಿ ನೀಡಿದ ಆಶ್ವಾಸನೆ ಆಶ್ವಾಸನೆಯಾಗಿ ಉಳಿದಿದೆಯೇ ಹೊರತು ಕಾರ್ಯಗತವಾಗಿಲ್ಲವೆಂದು ತಿಳಿಸಲು ಸಂಘವು ವಿಷಾದಿಸುತ್ತದೆ. ವಚನ ಭ್ರಷ್ಟತನ ಎಲ್ಲಾ ರಂಗಗಳಲ್ಲಿ ರಾರಾಜಿಸುತ್ತಿರುವುದಕ್ಕೆ ಇಂತಹ ನೀತಿ-ನಿಲುವುಗಳೇ ಕಾರಣವೆಂದು ಸಂಘವು ಅಭಿಪ್ರಾಯಪಡುತ್ತದೆ.

ಅರಣ್ಯ ಇಲಾಖೆಯ ಈ ನಿರಂಕುಶ ಪಾರಮ್ಯದ ಆಡಳಿತವನ್ನು ಸಂಘವು ಅನೇಕ ಬಾರಿ ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟಿದೆ. ಆದರೂ ಈ ಬೇಡಿಕೆ ಬಗ್ಗೆ ಯಾವುದೇ ಖಚಿತವಾದ ನಿರ್ಧಾರ ಕೈಗೊಳ್ಳದೇ, ಭ್ರಷ್ಟಾಚಾರ ಮತ್ತು ದೌರ್ಜನ್ಯಗಳಿಗೆ, ಅಸಂಬದ್ಧ ಮತ್ತು ಅಘೋಷಿತ ನಿಲುವೇ ಕಾರಣೀಭೂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಇಲಾಖೆಯ ಸಚಿವರಾಗಿ ಇಂತಹ ಕ್ರೌರ್ಯಗಳಿಗೆ ಕೃಪಾಪೋಷಿತರಾಗಿ ವರ್ತಿಸುತ್ತಿರುವಂತೆ ರೈತರು ಭಾವಿಸಿರುತ್ತಾರೆ. ರೈತಾಪಿ ವರ್ಗದ ನೈಜ ಭಾವನೆಗಳನ್ನು ತಮ್ಮ ಅದ್ಯ ಗಮನಕ್ಕೆ ಅನೇಕ ಬಾರಿ ತರಲಾಗಿದೆ. ಈ ದಿಸೆಯಲ್ಲಿ ರೈತರಿಗೆ ಒದಗಿಬಂದಿರುವ ಇಂತಹ ಕರಾಳ ಪರಿಸ್ಥಿಯನ್ನು ಸರಿಪಡಿಸುವ ಕೆಲಸವನ್ನು ಈಗಲಾದರೂ ಮಾಡಬೇಕೆಂದು ಸಂಘದ ಕಳಕಳಿಯ ಕೋರಿಕೆಯಾಗಿದೆ.
ಅರಣ್ಯ ಇಲಾಖೆಯು ರೈತರ ಭೂಮಿಯ ಮೇಲೆ ಬೆಳೆದ ಶ್ರೀಗಂಧದ ಮೇಲೆ ವಿಧಿಸಿರುವ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವಂತೆ ಕೋರಿಕೆಗಳನ್ನು ಸಲ್ಲಿಸಿದ್ದರೂ, ಸರ್ಕಾರ ಮತ್ತು ಸಚಿವರ ನಿರ್ಲಿಪ್ತತೆ, ದಿವ್ಯ ಮೌನ ಹಾಗೂ ಅಪ್ರಕಟಿತ ನಿರ್ಧಾರ ವಿಪರೀತವಾದ ಕಳ್ಳತನಗಳಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯಕ್ಕೆ ಕಾರಣೀಭೂತವಾಗಿದೆಯೆಂದು ಸಂಘವು ಪುನರುಚ್ಛರಿಸುತ್ತಿದೆ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ ಮತ್ತು ಲಂಚಗುಳಿತನ ಕೊನೆಗಾಣಿಸಲು ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಿ, ಇಲ್ಲವಾದಲ್ಲಿ ಕಳ್ಳತನಗಳನ್ನು ಮತ್ತು ಕಳ್ಳ ಮಾಲನ್ನು ಪಡೆಯುತ್ತಿರುವವರನ್ನು ಹೆಡೆಮುರಿ ಕಟ್ಟಿ ರೈತರಿಗೆ ಧೈರ್ಯ ಸ್ಥೈರ್ಯ ತುಂಬಬೇಕು. ಎರಡೂ ಸಾಧ್ಯವಾಗದಿದ್ದರೆ, ರೈತರು ಅವರು ಬೆಳೆದ ಫಸಲನ್ನು ನಿಭಾಯಿಸಿಕೊಳ್ಳಲು ಮುಕ್ತ ಅವಕಾಶ ನೀಡುವಂತೆ ಸಂಘವು ಒತ್ತಾಯಿಸಿ ಯಾವುದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹಸ್ತಕ್ಷೇಪ ಅಗತ್ಯವಿರುವುದಿಲ್ಲವೆಂದು ತಿಳಿಸಿದ್ದಾರೆ. ರೈತರು ಕೃಷಿ ಭೂಮಿಯಲ್ಲಿ ಬೆಳೆದ ಫಸಲಿಗೆ ಅರಣ್ಯ ಇಲಾಖೆಯ ಮರ್ಜಿ ಏಕೆ? ಶ್ರೀಗಂಧ ಮರ ನೆಡುವಾಗ ಈ ವಿಷಯವನ್ನು ತಿಳಿಸಲಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೂ ನಿರ್ಧಿಷ್ಟವಾದ ಉತ್ತರವನ್ನು ಸಂಘ ಬಯಸಿದೆ. ಈ ದಿಸೆಯಲ್ಲಿ ಅರಣ್ಯ ಇಲಾಖೆಯ ಕಾನೂನುಗಳು ಪ್ರಸಕ್ತ ಪರಿಸ್ಥಿತಿಯಲ್ಲಿ ಅಪ್ರಸ್ತುತವೆಂದು ಸಂಘವು ಸರ್ಕಾರಕ್ಕೆ ತಿಳಿಸಿದೆ.

ಅರಣ್ಯ ಮತ್ತು ಕೃಷಿ ಭೂಮಿಯಲ್ಲಿ ವಿಪರೀತವಾಗಿ ಆಗುತ್ತಿರುವ ಕಳ್ಳತನಗಳ ನಿಗ್ರಹಕ್ಕಾಗಿ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಒಂದು ವಿಶೇಷ ತನಿಖಾ ತಂಡ ರಚಿಸಿ, ಕಳ್ಳತನಗಳನ್ನು ಮತ್ತು ಕಳ್ಳ ಮಾಲನ್ನು ಪಡೆಯುತ್ತಿರುವವರನ್ನು ಕೊನೆಗಾಣಿಸಬೇಕೆಂದೂ ತಪ್ಪಿದಲ್ಲಿ ರೈತರಿಗೆ ಅವರು ಬೆಳೆದ ಬೆಳೆಯನ್ನು ಮುಕ್ತವಾಗಿ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದೆ.

ವಿವಿಧ ಕಾನೂನುಗಳನ್ನು ರೈತರ ಮೇಲೆ ಮಾತ್ರ ಹೇರಿ, ನೈಜ ಕಳ್ಳರನ್ನು ಮತ್ತು ಕಳ್ಳಮಾಲನ್ನು ಪಡೆಯುತ್ತಿರುವವರನ್ನು ಲೀಲಾಜಾಲವಾಗಿ ಕಾರ್ಯಾಚರಣೆ ಮಾಡಲು ಅರಣ್ಯ ಇಲಾಖೆ ಪೋಷಣೆ ಮಾಡುತ್ತಿರುವ ಗುಮಾನಿ ರೈತರಲ್ಲಿ ಗಾಢವಾಗಿ ಬೇರೂರುವ ಮೊದಲು, ಅದನ್ನು ಚಿವುಟಿ ಹಾಕುವ ಕಾರ್ಯ ಮಾಡಬೇಕೆಂದು ಸಂಘದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಗೌರವಾಧ್ಯಕ್ಷ ಕೆ.ಅಮರನಾರಾಯಣ ಆಗ್ರಹಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";