ಚಂದ್ರವಳ್ಳಿ ನ್ಯೂಸ್, ವಿಜಯಪುರ:
ತಾನು ಹೆತ್ತು ಹೊತ್ತು ಸಾಕಿ ಬೆಳಿಸಿದ್ದ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ಮಹಿಳೆಯೊಬ್ಬಳು ಸಾಯಲು ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಯಲ್ಲಿ ನಡೆದಿದೆ.
ಸ್ಥಳೀಯ ಮೀನುಗಾರರು ಮಹಿಳೆಯನ್ನು ರಕ್ಷಿಸಿದ್ದು ನಾಲ್ವರು ಮಕ್ಕಳು ಜಲಸಮಾಧಿ ಆಗಿರುವ ದುರ್ಘಟನೆ ಸಂಭವಿಸಿದೆ.
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸೇನ್ ನಿಂಗರಾಜ ಭಜಂತ್ರಿ ಹಾಗೂ ಹುಸೇನ್ ನಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಮಕ್ಕಳೊಂದಿಗೆ ಕಾಲುವೆಗೆ ಬಿದ್ದಿದ್ದ ಭಾಗ್ಯ ಎನ್ನುವ ಮಹಿಳೆಯನ್ನು ಮೀನುಗಾರರು ಕಾಲುವೆ ನೀರಿನಿಂದ ಎತ್ತಿ ಬದುಕಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾರಣ ಏನು- ನಿನ್ನೆ ಅಣ್ಣ- ತಮ್ಮಂದಿರ ನಡುವೆ ಜಗಳವಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದಿತ್ತು. ಜಗಳದ ಬಳಿಕ ನಾನು ಇಲ್ಲದ ವೇಳೆ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆ ರೀತಿ ಮಾಡಿಕೊಳ್ಳದಂತೆ ನಾನೇ ಬುದ್ಧಿ ಮಾತು ಹೇಳಿದ್ದೆ. ಬೆಂಗೂಳೂರಿಗೆ ಹೋಗೋಣ, ದುಡಿದು ಜೀವನ ಮಾಡೋಣ ಎಂದು ತಿಳಿ ಹೇಳಿ ಕುಟುಂಬ ಸಮೇತ ಬೈಕ್ನಲ್ಲಿ ದೇವರಿಗೆ ಬಂದಿದ್ದೆವು ಎಂದು ಪತಿ ತಿಳಿಸಿದ್ದಾರೆ.
ಪೆಟ್ರೋಲ್ ಖಾಲಿಯಾಗಿದ್ದರಿಂದ ಅವರಿಗೆ ಇಲ್ಲಿಯೇ ಇರುವಂತೆ ಹೇಳಿ ನಾನು ಮುಂದೆ ತೆರಳಿದ್ದೆ. ಕೆಲವು ಹೆಜ್ಜೆ ಮುಂದೆ ಹೋಗುತ್ತಿದ್ದಂತೆ ಯಾರೋ ಕಾಲುವೆಗೆ ಜಿಗಿದರೆಂದು ಮಾತನಾಡಿಕೊಳ್ಳಲಾಂಬಿಸಿದರು ಎಂದು ನಾಲ್ವರು ಮಕ್ಕಳನ್ನು ಕಳೆದುಕೊಂಡ ತಂದೆ ನಿಂಗರಾಜಭಜಂತ್ರಿ ಕಣ್ಣೀರು ಹಾಕಿ ಮಾಹಿತಿ ನೀಡಿದ್ದಾರೆ.