ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಇಂಧಿರಾಗಾಂಧಿ ವಸತಿ ಶಾಲೆ(ಪ.ಜಾತಿ)ಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಲ್ಲ 46 ವಿದ್ಯಾರ್ಥಿಗಳು ಮಾರ್ಚ್ /ಏಪ್ರಿಲ್-೨೦೨೫ರ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತೀರ್ಣರಾಗುವ ಮೂಲಕ ಸತತ ನಾಲ್ಕನೇ ಬಾರಿ ಶೇಕಡ ೧೦೦% ಫಲಿತಾಂಶ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಅತ್ಯುನ್ನತ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ದ್ವಿತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ವಿನಯ್. ಕೆ 616, ಲೀಲಾವತಿ ಜಿ 591, ದೇವರಾಜ ಸಿ ರವರು 586, ಪ್ರಜ್ವಲ್ ಎಸ್.ವಿ 589, ಕಾರ್ತಿಕ್ ಆರ್ 584 ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ವ್ಯಾಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಯು ೨೦೧೭-೧೮ನೇ ಸಾಲಿನಲ್ಲಿ ಆರಂಭವಾಗಿದ್ದು, ೨೦೨೨-೨೩ನೇ ಸಾಲಿನಲ್ಲಿ ಕಡ್ಲೆಗುದ್ದುವಿನಲ್ಲಿ 9 ಎಕರೆ ವಿಸ್ತೀರ್ಣ ಜಾಗದಲ್ಲಿ ಅತ್ಯಾಧುನಿಕ ಸಕಲ ಸೌಕರ್ಯಗಳನ್ನು ಹೊಂದಿರುವ ಅತ್ಯಾಕರ್ಷಕ ಕ್ಯಾಂಪಸ್ ನಿರ್ಮಿಸಲಾಗಿರುತ್ತದೆ.
ಶೈಕ್ಷಣಿಕ ವಿಭಾಗ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ, ಭೋಜನ ಶಾಲೆ, ಪ್ರಾಂಶುಪಾಲರ ವಸತಿ ಗೃಹ ಹಾಗೂ ಬೋಧಕ, ಬೋಧಕೇತರ ವಸತಿ ಗೃಹಗಳನ್ನು ನಿರ್ಮಿಸಲಾಗಿರುತ್ತದೆ. ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ೬ನೇ ತರಗತಿಗೆ ದಾಖಲಿಸಿಕೊಂಡು 10ನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡಲಾಗುತ್ತದೆ. ಪ್ರಸ್ತುತ 246 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸರ್ಕಾರದ ಆದೇಶದಂತೆ ಪ್ರವೇಶ, ಶಿಕ್ಷಣ, ವಸತಿ, ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಮೂರು ಜೊತೆ ಸಮವಸ್ತ್ರ, ಎರಡು ಜೊತೆ ಶೂ, ಪಠ್ಯಪುಸ್ತಕ, ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ.
ಕಂಪ್ಯೂಟರ್ ಮತ್ತು ಡ್ರಾಯಿಂಗ್ ಶಿಕ್ಷಣ ಕಲಿಸಲಾಗುತ್ತಿದೆ. ವಿವಿಧ ಎನ್‌ಜಿಓಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ರೂಪಿಸಲು ಶ್ರಮಿಸಲಾಗುತ್ತದೆ. ಸರ್ಕಾರ ಮತ್ತು ಕ್ರೈಸ್ ಕೇಂದ್ರ ಕಛೇರಿಯ ಉನ್ನತ ಅಧಿಕಾರಗಳು ಹಾಗೂ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಚಿತ್ರದುರ್ಗ ಇವರ ಮಾರ್ಗದರ್ಶನ ಮತ್ತು ಆದೇಶದಂತೆ ಜೂನ್ ಮಾಹೆಯಿಂದಲೆ ಉತ್ತಮ ಫಲಿತಾಂಶ ಪಡೆಯಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಯಲ್ಲಿ ತೊಡಗಿಸಿದ್ದರಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದು ಪ್ರಾಂಶುಪಾಲ ರಮೇಶ್ ಆರ್ ಅಭಿಪ್ರಾಯ ಪಟ್ಟಿದ್ದಾರೆ.
ಇಂತಹ ಫಲಿತಾಂಶ ಮಾರ್ಗದರ್ಶನ ಮಾಡಿದ ಎಲ್ಲ ಮೇಲಾಧಿಕಾರಿಗಳಿಗೆ ಧನ್ಯವಾದಗಳನ್ನು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಶುಭಾಷಯಗಳನ್ನು ಪ್ರಾಂಶುಪಾಲರು ತಿಳಿಸಿದ್ದಾರೆ.