ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಾಸ ಶರಣರ ಕೀರ್ತನೆಗಳನ್ನು ಅರ್ಥ ಮಾಡಿಕೊಂಡು ಬದುಕಿದರೆ ಭವಿಷ್ಯವೂ ಉತ್ತಮವಾಗಿ ರೂಪಗೊಳ್ಳುತ್ತದೆ ಎಂದು ಉಪನ್ಯಾಸಕ ವೇಣುಕುಮಾರ್ ತಿಳಿಸಿದರು.
ಭೀಮನಬಂಡೆ ಸಮೀಪದ ಯಾಜ್ಞವಲ್ಕ್ಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರ ಕೀರ್ತನೆಗಳನ್ನು ಹಾಡುವುದರ ಮೂಲಕ ಉಪನ್ಯಾಸಕ ಹಾಗೂ ಸಾಹಿತಿ ಶಿವಾನಂದ್ ವಿದ್ಯಾರ್ಥಿಗಳನ್ನು ಆಕರ್ಷಿಸಿದರು. ಮತ್ತು ಇವರ ಕಡೆದಷ್ಟು ಕನಸುಗಳು ಎಂಬ ಕೃತಿಯು ಲೋಕಾರ್ಪಣೆಯಾಗುತ್ತಿರುವುದಕ್ಕೆ ಈ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿ ಶುಭ ಹಾರೈಸಿದರು.
ಉಪನ್ಯಾಸಕ ಹರ್ಷ ಮಾತನಾಡಿ ತಿಮ್ಮಪ್ಪ ನಾಯಕ ಎಂಬ ಹುಡುಗ ದಾಸಶ್ರೇಷ್ಠ ಕನಕದಾಸರಾಗಿ ಬದಲಾದ ಜೀವನ ಚರಿತ್ರೆಯನ್ನು ಹಾಗೂ ಅವರ ಕೊಡುಗೆಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರವೀಣ್, ಸುಗುಣ, ಅಭಿ, ತೇಜಸ್, ನೇತ್ರ, ವಿದ್ಯಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

