ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಂವೇದನಾಶೀಲ ಯುವಜನತೆಯಿಂದ ಮಾತ್ರ ದೇಶ ನಿರ್ಮಾಣ ಸಾಧ್ಯ. ಸ್ವಾತಂತ್ರ್ಯದ ಬಳಿಕ ದೇಶ ಹಲವು ಕ್ಷೇತ್ರಗಳಲ್ಲಿ ಮುಂಚೂಣಿ ಪ್ರಗತಿ ಸಾಧಿಸಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ ಹೇಳಿದರು.
ಇಲ್ಲಿನ ಶಾಂತಿನಗರ, ದರ್ಗಾಜೋಗಿಹಳ್ಳಿಯ ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್ ಸಹಯೋಗದಲ್ಲಿ 79ನೇ ಭಾರತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಪ್ರತಿಭಾ ಪುರಸ್ಕಾರ, ನೋಟ್‌ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ಸ್ವೀಕಾರಾರ್ಹವಾದ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದಾಗ ಪರಿಶ್ರಮ ಮತ್ತು ಶ್ರದ್ದೆಯ ಅನನ್ಯ ಸಂವೇದನೆಗಳನ್ನು ಬೆಸೆದು, ಶಿಸ್ತಿನ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆಯಬಹುದು. ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ದೇಶ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಸಂಕಲ್ಪ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಮಾತನಾಡಿ, ನೇಕಾರ ಸಮುದಾಯದ ಪ್ರತಿಭೆಗಳು ಸಮಾಜದ ವಿವಿಧ ಹಂತಗಳಲ್ಲಿ ಗಣನೀಯವಾಗಿ ಗುರ್ತಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.
ಜಾಲಪ್ಪ ಲಯನ್ಸ್ ಸಂಸ್ಥೆ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ದೇಶ ಅತ್ಯಂತ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಅತ್ಯಂತ ಸಂತಸದ ವಿಚಾರ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದೇಶವನ್ನು ಪ್ರಗತಿಪರವಾಗಿ ಕಟ್ಟುವ ಕೆಲಸ ಆಗಬೇಕು. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಸ್ವಾತಂತ್ರ್ಯ ಅರ್ಥವನ್ನು ಹೆಚ್ಚು ಸಾಕಾರಗೊಳಿಸಲು ಸಾಧ್ಯ ಎಂದರು.
ಪ್ರತಿಭಾ ಪುರಸ್ಕಾರ, ನೋಟ್ ಬುಕ್ ವಿತರಣೆ:
ದ್ವಿತೀಯ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಸುಮಾರು 100 ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಲೇಖನಿ, ಪೆನ್ಸಿಲ್ ಬಾಕ್ಸ್‌ಗಳನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಜಿ.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎನ್.ರಾಮಣ್ಣ, ಕಾರ್ಯಾಧ್ಯಕ್ಷ ಈ.ಬಾಬು, ಸೋಮಶೇಖರ್, ಪ್ರಧಾನ ಕಾರ‍್ಯದರ್ಶಿ ಎನ್.ರಾಮಚಂದ್ರ, ಖಜಾಂಚಿ ಮುನಿನಾರಾಯಣಸ್ವಾಮಿ, ಸಹಕಾರ‍್ಯದರ್ಶಿ ವಿಜಯಕುಮಾರ್, ಆರ್.ಶೋಭಾ, ನಿರ್ದೇಶಕರಾದ ಲಕ್ಷ್ಮೀಕಾಂತ, ಮಧುಚಂದ್ರ, ಜಯರಾಮ್, ನಾರಾಯಣಸ್ವಾಮಿ, ಚಂದ್ರಶೇಖರ್, ಶೋಭಾ, ಕುಮಾರ್, ಲಯನ್ಸ್ ಕ್ಲಬ್ ಖಜಾಂಚಿ ಕೆ.ಸಿ.ನಾಗರಾಜ್, ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ರಾಯಲ್ಸ್ ಉಪಾಧ್ಯಕ್ಷ ಲಕ್ಷ್ಮೀಶ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಆವರಣದಲ್ಲಿ ಧ್ವಜಾರೋಹಣ:
ಸ್ವಾತಂತ್ರ್ಯ ದಿನದ ಅಂಗವಾಗಿ ಸಂಘದ ಆವರಣದಲ್ಲಿ ಬೆಳಗ್ಗೆ ರಾಷ್ಟ್ರಧ್ವಜಾರೋಹಣ ನಡೆಯಿತು. ಸಂಘದ ಅಧ್ಯಕ್ಷ ರಾಮಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಸಿಹಿ ಹಂಚಿ ಸಂಭ್ರಮಿಸಲಾಯಿತು.

