ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಂಬರಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾ.ರಾ. ಮಹೇಶ್ ಸ್ಪರ್ಧೆ ಮಾಡ್ತಾರೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು. ಆ ಮೂಲಕ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಹಾಲಿ ಶಾಸಕ ಜಿ.ಟಿ. ದೇವೇಗೌಡರಿಗೆ ಶಾಕ್ ಕೊಡಲು ದಳಪತಿಗಳು ಮುಂದಾದ್ರಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಇದೇ ವಿಚಾರವಾಕ್ಕೀಗ ಸ್ವತಃ ಜಿಟಿಡಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಈಗ ಜೆಡಿಎಸ್ನಲ್ಲಿ ಇದ್ದೇನೆ, ಮುಂದೆಯು ಜೆಡಿಎಸ್ ನಲ್ಲೇ ಇರುತ್ತೇನೆ. ಜೆಡಿಎಸ್ನಿಂದಲೇ ಸ್ಪರ್ಧೆ ಮಾಡುತ್ತೇನೆ. ಜೆಡಿಎಸ್ ನಿಂದ ಒಂದು ಹೆಜ್ಜೆ ತೆಗೆದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದ್ದು, ನಮ್ಮ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ. ಚುನಾವಣೆ ಬಂದಾಗ ಬೇರೆ ವಿಚಾರದ ಬಗ್ಗೆ ಚರ್ಚೆ ಮಾಡೋಣ. ಕೆಲ ವಿಚಾರದಲ್ಲಿ ನೋವಾಗಿದೆ, ಅದು ನಾಯಕರಿಗೂ ಗೊತ್ತಿದೆ. ಹಾಗಂತ ನನಗೆ ನೋವಾಗಿದೆ ಅಂತಾ ಪಕ್ಷದಿಂದ ಹೊರ ಹೋಗಿಲ್ಲ. ಜೆಡಿಎಸ್ ವಿರುದ್ಧವಾಗಿ ನಾನು ಯಾವತ್ತೂ ಮಾತನಾಡಿಲ್ಲ. ಒಳ್ಳೆಯ ಟೈಮ್ ಬರುತ್ತದೆ, ಎಲ್ಲವೂ ಒಳ್ಳೆಯದಾಗುತ್ತೆ. ಕಾಲ ಕಳೆದಂತೆ ಎಲ್ಲಾ ಮುನಿಸು ನೋವು ಮಾಯವಾಗುತ್ತೆ ಎಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ತಮ್ಮ ಅನುಪಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸಭೆ ವಿಚಾರ ಸಂಬಂಧವೂ ಮಾತನಾಡಿರುವ ಅವರು, ಯಾರಿಗೂ ದ್ರೋಹ ಮಾಡುವ ಬುದ್ಧಿ ನನಗಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋದ ಮೇಲೆ ಜೆಡಿಎಸ್ ಕಟ್ಟಿ ಬೆಳೆಸಿದ್ದೇನೆ. ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಜೊತೆಗೆ ಒಟ್ಟಾಗಿ ಇದ್ದೇನೆ. ಕುಮಾರಸ್ವಾಮಿ ಸಿಎಂ ಆಗಬೇಕೆಂದು ಪಕ್ಷ ಕಟ್ಟಿದ್ದೇನೆ. ಜೆಡಿಎಸ್ನಲ್ಲಿ ಗಟ್ಟಿಯಾಗಿ ಇದ್ದೇನೆ, ಜೆಡಿಎಸ್ನಲ್ಲೇ ಇರುತ್ತೇನೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಜಾಸ್ತಿ ಇದೆ ಎಂದು ಅವರು ತಿಳಿಸಿದ್ದಾರೆ.
ಮುನಿಸು ಏಕೆ?:
ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಎಂಎಲ್ ಸಿ ಚುನಾವಣೆಯಲ್ಲೂ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂಬುದು ಜೆಡಿಎಸ್ ಮುಖಂಡರ ಪ್ರಮುಖ ಆರೋಪವಾಗಿದೆ.
ಜೆಡಿಎಸ್ ಶಾಸಕರಾಗಿರುವ ಜಿಟಿಡಿ ಪದೇ ಪದೇ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರನ್ನು ಹೊಗಳುತ್ತಿದ್ದಿದ್ದು ಪಕ್ಷಕ್ಕೆ ಮುಜುಗರ ತಂದಿದೆ ಎಂಬುದು ನಾಯಕರ ದೂರುಗಳಾಗಿವೆ ಎನ್ನಲಾಗಿದೆ.

