ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರ ದರ್ಪದ ಅಮಲಿನಿಂದ ಕೊಬ್ಬಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನದಾತನ ಮೇಲೆ ಬರೆಯ ಬರೆ ಎಳೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಗಣಿ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆಯಲ್ಲಿ ರೈತನ ಜೀವನಾಧಾರವಾಗಿರುವ ಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ ಬಿದ್ದಿದೆ. ಪರಿಣಾಮ; ಹಾಲಿನ ಖರೀದಿ ದರಕ್ಕೆ ಕತ್ತರಿ ಪ್ರಯೋಗವಾಗಿದೆ ಎಂದು ಅವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟಗಳು ಏಕಪಕ್ಷೀಯವಾಗಿ ಹಾಲಿನ ಖರೀದಿ ದರದಲ್ಲಿ ₹1.50 ಕಡಿತ ಮಾಡಿವೆ. (ಹೊಸ ಖರೀದಿ ದರ ₹30.50 ರಿಂದ ₹29ಕ್ಕೆ ಕುಸಿದಿದೆ). ಕಾಮಧೇನುವನ್ನೇ ನಂಬಿದ್ದ ರೈತರ ಕರುಳಿಗೆ ಕೊಳ್ಳಿ ಬಿದ್ದಿದೆ ಎಂದು ಕುಮಾರಸ್ವಾಮಿ ಸಂಕಟ ವ್ಯಕ್ತ ಪಡಿಸಿದ್ದಾರೆ.
ನಮ್ಮದು ರೈತಪರ ಸರ್ಕಾರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತ ಗಮನ ಹರಿಸಬೇಕು. ಅವರಿಗೆ ಅಷ್ಟು ಸಮಯ ಇದೆ ಎಂದು ನಾನಾದರೂ ಪರಿಭಾವಿಸುತ್ತೇನೆ ಎಂದು ಅವರು ಹಾಲಿನ ಖರೀದಿ ದರಕ್ಕೆ ಕತ್ತರಿ ಎನ್ನುವ ಟ್ಯಾಗ್ ಲೈನ್ ಹಾಕಿ ಕಿಡಿ ಕಾರಿದ್ದಾರೆ.