ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೆಪ್ಟೆಂಬರ್ 12ರಿಂದ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್‌ನ ಮೂಲ ಬೆಲೆ 200 ರೂಪಾಯಿಗಿಂತ ಹೆಚ್ಚಿರಬಾರದೆಂದು ಸರ್ಕಾರ ನಿಗದಿ ಮಾಡಿದ್ದು ಸಿನಿ ಪ್ರೇಮಿಗಳು ನಿಟ್ಟುಸಿರು ಬಿಟುವಂತಾಗಿದೆ.
ಕರ್ನಾಟಕ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರಗಳನ್ನು ಮನಬಂದಂತೆ ಏರಿಕೆ ಮಾಡುತ್ತಿದ್ದರು. ಇದರಿಂದ ಸಿನೆಮಾ ಪ್ರೇಕ್ಷಕರು ಹಿಡಿಶಾಪ ಹಾಕುತ್ತಿದ್ದರಿಂದ ಸರ್ಕಾರ ನಿರ್ದಿಷ್ಟ ಬೆಲೆ ನಿಗದಿ ಮಾಡಿದೆ.
ಮೂಲ ಬೆಲೆ 200 ರೂ.ಗೆ ತೆರಿಗೆ ಸೇರಿಸಿ ಗರಿಷ್ಠ ದರ 236 ಆಗುತ್ತದೆ. ಈ ನಿಯಮ ಜಾರಿಯಿಂದ ಪ್ರೇಕ್ಷಕ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರತಿ ಬಾರಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವಾಗ ದುಬಾರಿ ಟಿಕೆಟ್ ದರ ನಿಗದಿ ಮಾಡಲಾಗುತ್ತಿತ್ತು. ಅದರಲ್ಲೂ ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗುತ್ತವೆ ಎಂದರೆ ಟಿಕೆಟ್ ದರ 500ರಿಂದ ಆರಂಭ ಆಗಿ 1000 ರೂಪಾಯಿ ತಲುಪಿದ ಉದಾಹರಣೆ ಇದೆ.
ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಏಕರೂಪ ಟಿಕೆಟ್ ದರ ಜಾರಿಗೆ ತರೋದಾಗಿ ಹೇಳಿತ್ತು. ಸೆಪ್ಟೆಂಬರ್ 12ರಿಂದ ಈ ನಿಯಮ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದಕ್ಕೆ ಕೆಲವು ಷರತ್ತುಗಳು ಕೂಡ ಇರಲಿವೆ. ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರಕ್ಕೆ ಕಡಿವಾಣವೇ ಇಲ್ಲದಂತೆ ಆಗಿತ್ತು.
ಇದರಿಂದ ಜನಸಾಮಾನ್ಯರು ಸಿನಿಮಾ ನೋಡೋದು ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಕಾರಣದಿಂದಲೇ ಜನರು ಥಿಯೇಟರ್ನತ್ತ ಮುಖ ಮಾಡುವುದಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದವು. ಈಗ ಇದಕ್ಕೆ ಕಡಿವಾಣ ಬಿದ್ದಿದೆ. ಸರ್ಕಾರ ಶುಕ್ರವಾರ ಹೊಸ ಆದೇಶ ಹೊರಡಿಸಿ ಪ್ರೇಕ್ಷಕರಿಗೆ ಹೊರೆಯಾಗದಂತೆ ಟಿಕೆಟ್ ದರ ನಿಗದಿ ಮಾಡಿದೆ.
ಇಂದಿನಿಂದಲೇ ಹೊಸ ಆದೇಶ ಅನ್ವಯ ಆಗಲಿದ್ದು ಇದರ ಪ್ರಕಾರ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್‌ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ. ಶೇ.18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ಆಗಲಿದೆ. ಇದು ಪ್ರೇಕ್ಷಕ ನಿಟ್ಟುಸಿರು ಬಿಡುವಂತೆ ಮಾಡಿದೆ. ಕೆಲವು ಷರತ್ತುಗಳನ್ನು ಕೂಡ ಸರ್ಕಾರ ಹೇರಿದೆ.
ಅನೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಗೋಲ್ಡ್ ಕ್ಲಾಸ್ ವ್ಯವಸ್ಥೆ ಇರುತ್ತವೆ. ಇವುಗಳಿಗೆ 200 ರೂಪಾಯಿ ಟಿಕೆಟ್ ದರದ ಮಿತಿ ಇಲ್ಲ. ಆ ಆಸನಗಳಿಗೆ ಮಲ್ಟಿಪ್ಲೆಕ್ಸ್ಗಳು ತಮ್ಮಿಷ್ಟದ ದರ ನಿಗದಿ ಮಾಡಬಹುದು. ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ರಿಕ್ಲೈನ್ ಸೀಟ್ಗಳು ಇರುತ್ತವೆ. ಅವುಗಳಿಗೂ 200 ರೂಪಾಯಿ ಟಿಕೆಟ್ ದರ ಅನ್ವಯ ಆಗುತ್ತದೆ ಎನ್ನಲಾಗಿದೆ. ಸದ್ಯ ಟಿಕೆಟ್ ಮಂದಿರಗಳಿಗೆ ಆದೇಶ ಪ್ರತಿ ತಲುಪಿಲ್ಲ. ಇದು ತಲುಪಿದ ಬಳಿಕ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

