ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅರಾಜಕತೆಯ ವಿಕೇಂದ್ರೀಕರಣದಲ್ಲಿ ಸಿದ್ದಹಸ್ತ ಕರ್ನಾಟಕ ಕಾಂಗ್ರೆಸ್ ಸರಕಾರ, ಅಧಿಕಾರ ವಿಕೇಂದ್ರೀಕರಣದ ಕ್ರೆಡಿಟ್ ಹೊಡೆಯಲು ಹೊರಟಿರುವುದು ಹಾಸ್ಯಾಸ್ಪದ ಎಂದು ಜೆಡಿಎಸ್ ಟೀಕಿಸಿದೆ.
ಅಂಕಿ-ಅಂಶಗಳ ಕಳ್ಳಾಟದ ಮೂಲಕ ಜನರನ್ನು ಮರಳು ಮಾಡುತ್ತಿರುವ ಸರಕಾರ, ಸ್ಥಳೀಯ ಸಂಸ್ಥೆಗಳನ್ನು ಅಧಃಪತನಕ್ಕೆ ತಳ್ಳುತ್ತಿದೆ. ಗ್ರಾಮ ಸ್ವರಾಜ್ಯದ ಆಶಯವನ್ನೇ ಮೂಲೋತ್ಪಾಟನೆ ಮಾಡುತ್ತಿದೆ. ಅಪರೇಷನ್ ಹಸ್ತದ ಮೂಲಕ ಈಗಾಗಲೇ ವಿಕೇಂದ್ರೀಕರಣವೆನ್ನುವ ಆದರ್ಶ ವ್ಯವಸ್ಥೆಯನ್ನು ವಿಕೃತಗೊಳಿಸಿದೆ. ಹಳ್ಳಿ ರಾಜಕಾರಣದಲ್ಲಿಯೂ ಹುಳಿ ಹಿಂಡಿ ಜನರನ್ನು ಒಡೆದು ಆಳುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಗಾಂಧೀಗಿರಿ ಎಂದು ಜಪಿಸುವ ಭಾರತೀಯ ಕಾಂಗ್ರೆಸ್ ಎಂದೂ ಪೂಜ್ಯ ಬಾಪು ಮಾರ್ಗದಲ್ಲಿ ನಡೆಯಲಿಲ್ಲ. ಅನೈತಿಕಗಿರಿಯೇ ಅದರ ಆತ್ಮಬಲ. ರಾಜಕೀಯ ಕಷ್ಟ ಬಂದಾಗಷ್ಟೇ ಆತ್ಮರಕ್ಷಣೆಗಾಗಿ ಗಾಂಧಿ, ಅಂಬೇಡ್ಕರ್, ಸಂವಿಧಾನ ಬೇಕು. ಅಸಲಿಗೆ ಪ್ರಜಾಪ್ರಭುತ್ವದ ಮೂಲ ತತ್ವದಲ್ಲಿಯೇ ನಂಬಿಕೆ ಇಲ್ಲದ, ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್, ಎಂದಿಗೂ ವಿಕೇಂದ್ರೀಕರಣದಲ್ಲಿ ನಂಬಿಕೆ ಇರಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಹರಿಹಾಯ್ದಿದೆ.
ಹಣಕಾಸು, ಉತ್ತರದಾಯಿತ್ವದಲ್ಲಿ ಕರ್ನಾಟಕ ಮೇಲ್ಮಟ್ಟದಲ್ಲಿದೆಯಾ? ಉತ್ತರದಾಯಿತ್ವಕ್ಕೆ ಬಂದರೆ, ನಿರಂತರ ದರ ಏರಿಕೆಯಿಂದ ಬಡಜನರ ಉಸಿರು ಕಸಿಯುತ್ತಿದೆ. ಹಣಕಾಸು ನಿರ್ವಹಣೆಯಲ್ಲಿ ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಅಧ್ವಾನ ಸ್ಥಿತಿಯಲ್ಲಿದೆ. ಸಾಲದ ಮೇಲೆ ಸಾಲ ಮಾಡಿ ಜನರ ಮೇಲೆ ಹೊರೆ ಹೇರುವುದು, ತೆರಿಗೆ ಸುಲಿಗೆ ಮೂಲಕವೇ ಖಜಾನೆ ಭರ್ತಿ ಮಾಡುವುದು ಹಣಕಾಸು ನಿರ್ವಹಣೆಯಾ? ಉತ್ತರದಾಯಿತ್ವವಾ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಈ ಸರಕಾರಕ್ಕೆ ವಿಕೇಂದ್ರೀಕರಣದಲ್ಲಿ ನಂಬಿಕೆ ಇದ್ದರೆ ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಹೆದರಿಕೆ ಏಕೆ? ಎಂದು ಜೆಡಿಎಸ್ ಪ್ರಶ್ನಿಸಿದೆ.